ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ವಿಭಾಗಗಳು ನಷ್ಟದಲ್ಲಿ ನಡೆಯುತ್ತಿದ್ದು, ಇದನ್ನು ಒಂದಷ್ಟು ಕಡಿಮೆ ಮಾಡಲು ಸರ್ಕಾರ ಹೊಸ ಪ್ಲಾನ್ ಒಂದನ್ನು ಮಾಡಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಗಳಲ್ಲಿ ವಿನಾಯಿತಿ ಕೊಡಿಸಲು ಚಿಂತನೆ ನಡೆಸಲಾಗಿದೆ.
ಡೀಸೆಲ್ ಸೇರಿದಂತೆ ಬಸ್ ಗಳ ಬಿಡಿ ಭಾಗಗಳ ಬೆಲೆ ಏರಿಕೆಯಾಗಿರುವುದು, ಕೊರೊನಾ ಲಾಕ್ ಡೌನ್ ಹಾಗೂ ವಿವಿಧ ಕಾರಣಗಳಿಂದ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದ್ದು, ಇದನ್ನು ಒಂದಷ್ಟು ಕಡಿಮೆ ಮಾಡುವ ಸಲುವಾಗಿ ಟೋಲ್ ವಿನಾಯಿತಿಗೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿದ ಬಂದಿದೆ.
ಪ್ರಸ್ತುತ ಕೆ.ಎಸ್.ಆರ್.ಟಿ.ಸಿ., ಬಿಎಂಟಿಸಿ, ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ಮತ್ತು ಕೆ.ಕೆ.ಆರ್.ಟಿ.ಸಿ.ಯಿಂದ ಪ್ರತಿ ವರ್ಷ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಶುಲ್ಕವಾಗಿ 100 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗುತ್ತದೆ. ಹೀಗಾಗಿ ಟೋಲ್ ವಿನಾಯಿತಿ ಸಿಕ್ಕರೆ ನಷ್ಟದ ಪ್ರಮಾಣ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರ ಇದರ ಹಿಂದಿದೆ.