
ಇಂಥದೊಂದು ಹೃದಯ ವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿಯ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ನಡೆದಿದ್ದು, ವಿರೇಶ ಸೌದ್ರಿ – ಉಷಾ ದಂಪತಿಯ ದ್ವಿತೀಯ ಪುತ್ರ ಸುಹಾಸ್ ಸೌದ್ರಿ, ಕಾರಟಗಿ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಬಾಲ್ಯದಿಂದಲೂ ಕಿಡ್ನಿ ಸಮಸ್ಯೆಯಿಂದ ಈತ ಬಳಲುತ್ತಿದ್ದು ಇದರ ನಡುವೆಯೂ ವ್ಯಾಸಂಗದಲ್ಲಿ ಮುಂದಿದ್ದ. ಇದರಿಂದಾಗಿ ಶಿಕ್ಷಕರಿಗೆ ನೆಚ್ಚಿನ ಶಿಷ್ಯನಾಗುವುದರ ಜೊತೆಗೆ ಸಹಪಾಠಿಗಳಿಗೂ ಅಚ್ಚುಮೆಚ್ಚಿನ ಗೆಳೆಯನಾಗಿದ್ದ.
ಇತ್ತೀಚಿಗೆ ಆತನ ಆರೋಗ್ಯ ಸಮಸ್ಯೆ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಶಾಲೆಗೆ ಕಳಿಸಲಾಗುತ್ತಿರಲಿಲ್ಲ. ಹೀಗಾಗಿ ಸ್ನೇಹಿತರಿಗೆ ಕರೆ ಮಾಡಿ ಹೋಂ ವರ್ಕ್ ಗಳನ್ನು ವಾಟ್ಸಾಪ್ ಮೂಲಕ ತರಿಸಿಕೊಂಡು ಮನೆಯಲ್ಲಿಯೇ ಮಾಡುತ್ತಿದ್ದ. ಶನಿವಾರ ಬಾಲಕನಿಗೆ ಅದೇನು ಮುನ್ಸೂಚನೆ ಸಿಕ್ಕಿತೋ ಏನೋ ಪೋಷಕರ ಬಳಿ ಶಾಲೆಗೆ ಕರೆದುಕೊಂಡು ಹೋಗುವಂತೆ ಕೇಳಿದ್ದಾನೆ. ಈತ ಬಂದ ಸುದ್ದಿ ಕೇಳಿ ಓಡೋಡಿ ಬಂದ ಗೆಳೆಯರು ಕಾರಿನಲ್ಲಿ ಕುಳಿತಿರುವಂತೆಯೇ ಆತನಿಗೆ ಫ್ರೆಂಡ್ಶಿಪ್ ಬ್ಯಾಂಡ್ ಕಟ್ಟಿದ್ದಾರೆ. ಇದರಿಂದ ಖುಷಿಯಿಂದ ಮನೆಗೆ ಹೋದ ಬಾಲಕ ಸುಹಾಸ್ ಭಾನುವಾರ ಕೊನೆಯುಸಿರೆಳೆದಿದ್ದಾನೆ.