ಬೆಳಿಗ್ಗಿನ ತಿಂಡಿಗೆ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ…? ಮನೆಯಲ್ಲಿ ಸಿರಿಧಾನ್ಯವಿದ್ದರೆ ಅದರಲ್ಲಿ ರುಚಿಕರವಾದ ಪೊಂಗಲ್ ಮಾಡಿ ಸವಿಯಿರಿ. ಇಲ್ಲಿ ಸಾಮೆ ಅಕ್ಕಿಯ ಪೊಂಗಲ್ ಮಾಡುವ ವಿಧಾನ ಇದೆ ನೋಡಿ.
ಬೇಕಾಗುವ ಸಾಮಗ್ರಿಗಳು:
¾ ಕಪ್ – ಸಾಮೆ, ½ ಕಪ್ – ಹೆಸರುಬೇಳೆ, 4 ಕಪ್ – ನೀರು, 3 ಚಮಚ – ತುಪ್ಪ, ಚಿಟಿಕೆ – ಇಂಗು, 4 – ಹಸಿಮೆಣಸು, 1 ಟೀ ಸ್ಪೂನ್ – ಕಾಳುಮೆಣಸು, ½ ಟೀ ಸ್ಪೂನ್ – ಸಾಸಿವೆ, 1 ಟಿ ಸ್ಪೂನ್ – ಜೀರಿಗೆ, 1/8 ಟೀ ಸ್ಪೂನ್ – ಅರಿಶಿನ, 8 – ಗೋಡಂಬಿ, 7 – ಎಸಳು ಕರಿಬೇವು, ½ ಟೇಬಲ್ ಸ್ಪೂನ್ – ತುರಿದ ಶುಂಠಿ, ರುಚಿಗೆ ತಕ್ಕಷ್ಟು- ಉಪ್ಪು.
ಮಾಡುವ ವಿಧಾನ:
ಮೊದಲಿಗೆ ಸಾಮೆ ಅಕ್ಕಿಯನ್ನು ಚೆನ್ನಾಗಿ ತೊಳೆದು ¾ ಕಪ್ ನೀರಿನಲ್ಲಿ ನೆನೆಸಿರಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದರಲ್ಲಿ ಹೆಸರುಬೇಳೆ ಹಾಕಿ ಪರಿಮಳ ಬರುವವರೆಗೆ ಹುರಿದು ನಂತರ ತೊಳೆದುಕೊಳ್ಳಿ. ಅಕ್ಕಿ ತೊಳೆದು ಕುಕ್ಕರ್ ಗೆ ಹಾಕಿ ಅದಕ್ಕೆ ತೊಳೆದುಕೊಂಡ ಬೇಳೆ ಕೂಡ ಸೇರಿಸಿ 3 ಕಪ್ ನೀರು ಹಾಕಿ.
ನಂತರ ಒಗ್ಗರಣೆ ಕಡಾಯಿಗೆ 2 ಟೇಬಲ್ ಸ್ಪೂನ್ ತುಪ್ಪ/ಎಣ್ಣೆ ಹಾಕಿ ಅದಕ್ಕೆ ಇಂಗು, ಸಾಸಿವೆ, ಜೀರಿಗೆ, ಜಜ್ಜಿದ ಕಾಳುಮೆಣಸು, ಗೋಡಂಬಿ ಹಾಕಿ ಹುರಿಯಿರಿ. ನಂತರ ಹಸಿಮೆಣಸು ಸೀಳಿ ಹಾಕಿ, ಹಾಗೇ ಕೊತ್ತಂಬರಿ ಸೊಪ್ಪು, ಶುಂಠಿ ಕೂಡ ಸೇರಿಸಿ ಮಿಕ್ಸ್ ಮಾಡಿ ಇದನ್ನು ಕುಕ್ಕರ್ ಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಅರಿಶಿನ ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಹದ ಉರಿಯಲ್ಲಿ 2 ವಿಷಲ್ ಕೂಗಿಸಿಕೊಳ್ಳಿ.