ಸಾಮಾಜಿಕ ಜಾಲತಾಣಗಳು ಎಷ್ಟು ಉಪಯುಕ್ತವೋ ಕೆಲವೊಮ್ಮೆ ಅಷ್ಟೇ ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಹಾಕುವ ಪೋಸ್ಟ್ ಅಥವಾ ಮತ್ತೊಬ್ಬರು ಹಾಕಿದ್ದನ್ನು ಶೇರ್ ಅಥವಾ ಲೈಕ್ ಮಾಡಿದರೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಬರಬಹುದು.
ಹೌದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆ ನಡೆದ ನಂತರ ಕೆಲವೊಬ್ಬರು ಪ್ರಚೋದನಾಕಾರಿ ಪೋಸ್ಟ್ ಗಳನ್ನು ಹಾಕುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದ್ದು, ಅಂತವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ನಕಲಿ ಅಕೌಂಟ್ ಸೃಷ್ಟಿಸಿ ಪೋಸ್ಟ್ ಹಾಕಿದರೂ ಸಹ ಪೊಲೀಸರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಹೀಗಾಗಿ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಪೋಸ್ಟ್ ಲೈಕ್ ಹಾಕುವಾಗ ಎಚ್ಚರ ವಹಿಸಿ ಇಲ್ಲದಿದ್ದರೆ ವರ್ಷಗಟ್ಟಲೆ ನ್ಯಾಯಾಲಯಕ್ಕೆ ಅಲೆಯುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದ್ದಾರೆ. ಪ್ರಚೋದನಾಕಾರಿ ಪೋಸ್ಟ್ ಹಾಕಿರುವ ಸಂಬಂಧ ಈ ಮೊದಲು 5 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದೀಗ ಮತ್ತೆ 12 ಪ್ರಕರಣಗಳನ್ನು ದಾಖಲಿಸಲಾಗಿದೆ. ಈವರೆಗೆ ಒಟ್ಟು 17 ಪ್ರಕರಣಗಳು ದಾಖಲಾದಂತಾಗಿದ್ದು, ಮತ್ತಷ್ಟು ಜನರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ.