ಕೇರಳದ ಮಲಪ್ಪುರಂನಲ್ಲಿ ತಾಯಿ-ಮಗನ ಜೋಡಿ ವಿಶಿಷ್ಟ ಸಾಧನೆ ಮಾಡಿದೆ. ಇಬ್ಬರೂ ಸಾರ್ವಜನಿಕ ಸೇವಾ ಆಯೋಗದ (PSC) ಪರೀಕ್ಷೆಯನ್ನು ಒಟ್ಟಿಗೆ ಪಾಸ್ ಮಾಡಿದ್ದಾರೆ. ತಾಯಿಗೆ ಈಗ 42 ವರ್ಷ, ಮಗನಿಗೆ 24 ವಯಸ್ಸು.
ತಾಯಿ-ಮಗ ಇಬ್ಬರೂ ಜೊತೆಯಾಗಿಯೇ ಕೋಚಿಂಗ್ ಕ್ಲಾಸ್‌ಗೆ ಹೋಗಿದ್ದಾರೆ. ಟೀಚರ್‌ಗಳೇ ತಮಗೆ ಪ್ರೇರಣೆ ಎನ್ನುತ್ತಾನೆ ಮಗ. ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆ ಬರೆಯಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನ ತಂದೆ ಮಾಡಿಕೊಟ್ಟಿದ್ದರಂತೆ.
ಇಬ್ಬರೂ ತೇರ್ಗಡೆಯಾಗುತ್ತೇವೆಂಬ ನಿರೀಕ್ಷೆ ಇರಲಿಲ್ಲ ಅಂತಾ ಮಗ ವಿವೇಕ್ ಸಂತಸ ಹಂಚಿಕೊಂಡಿದ್ದಾರೆ. ವಿವೇಕ್ 10ನೇ ಕ್ಲಾಸ್‌ನಲ್ಲಿದ್ದಾಗ ಮಗನಿಗೆ ಓದಿನ ಬಗ್ಗೆ ಆಸಕ್ತಿ ಬೆಳೆಯಲಿ ಎಂಬ ಕಾರಣಕ್ಕೆ ಬಿಂದು ಪುಸ್ತಕ ಓದಲು ಆರಂಭಿಸಿದ್ದರು. ಇದರಿಂದ ಬಿಂದು ಕೂಡ ಕೇರಳದ ಪಿಎಸ್‌ಸಿ ಪರೀಕ್ಷೆ ಬರೆಯಲು ಪ್ರೇರಣೆ ಪಡೆದರು.
ಬಿಂದು ಲೋವರ್ ಡಿವಿಶನಲ್ ಕ್ಲರ್ಕ್ ಪರೀಕ್ಷೆಯನ್ನು 38ನೇ ರ್ಯಾಂಕ್‌ನೊಂದಿಗೆ ತೇರ್ಗಡೆಯಾಗಿದ್ದಾರೆ. ಮಗ ವಿವೇಕ್ ಎಲ್‌ಜಿಎಸ್ ಪರೀಕ್ಷೆಯಲ್ಲಿ 92ನೇ ರ್ಯಾಂಕ್ ಪಡೆದಿದ್ದರು. ಕಳೆದ 10 ವರ್ಷಗಳಿಂದ ಬಿಂದು ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದಾರೆ. ಪರೀಕ್ಷೆಗೆ 6 ತಿಂಗಳಿದೆ ಎನ್ನುವಾಗ ಬಿಂದು ಓದಲು ಆರಂಭಿಸಿದ್ದರು. ಯಾವುದೇ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಬಿಂದು ತಾಜಾ ಉದಾಹರಣೆಯಾಗಿದ್ದಾರೆ.