ದೆಹಲಿ: ವೈದ್ಯರು ತೆಗೆದುಕೊಳ್ಳುವ ಸಾಂಪ್ರದಾಯಿಕ ಹಿಪೊಕ್ರೆಟಿಕ್ ಪ್ರಮಾಣವಚನವನ್ನು ಬದಲಾಯಿಸಿ ಚರಕ ಶಪಥವನ್ನ ಸೇರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ವೈದ್ಯರ ಪ್ರಮಾಣ ವಚನವನ್ನು ಬದಲಾಯಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್ ಹೇಳಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ತಿಳಿಸಿದಂತೆ, ಹಿಪೊಕ್ರೆಟಿಕ್ ಪ್ರಮಾಣವನ್ನು ಚರಕ ಶಪಥದೊಂದಿಗೆ ಬದಲಿಸುವ ಯಾವುದೇ ಯೋಜನೆಯಿಲ್ಲ ಎಂದು ಸಚಿವರು ರಾಜ್ಯಸಭೆಯಲ್ಲಿ ಉತ್ತರಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳು ಈ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಇದು ಗ್ರೀಕ್ ವೈದ್ಯ ಹಿಪ್ಪೊಕ್ರೇಟ್ಸ್ ಅವರಿಂದ ಬಂದಿದೆ. ಚರಕ ಶಪಥ ಎಂಬುದು ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಮೂಲವಾಗಿದೆ.
ಫೆಬ್ರವರಿ 7 ರಂದು ಎಲ್ಲಾ ವೈದ್ಯಕೀಯ ಕಾಲೇಜುಗಳೊಂದಿಗೆ ನಡೆದ ಚರ್ಚೆಯ ಸಂದರ್ಭದಲ್ಲಿ, ಎನ್‌ಎಂಸಿ ವೈದ್ಯರು ಮಾಡಿದ ಪ್ರಮಾಣ ವಚನವನ್ನು ಬದಲಿಸಲು ಸೂಚಿಸಿದಾಗ ಈ ವಿಷಯವನ್ನು ಪ್ರಸ್ತಾಪಿಸಲಾಯಿತು.