ಉಂಡೆ ಅಂದರೆ ಸಾಮಾನ್ಯವಾಗಿ ನಾವು ಸಿಹಿ ತಿಂಡಿ ಅಂದು ಕೊಳ್ಳುತ್ತೇವೆ. ಆದರೆ ಇದು ಸಿಹಿಯಲ್ಲ. ಉಂಡೆ ಎಂಬ ಹೆಸರಿನ ಖಾರದ ತಿನಿಸು. ಹಬೆಯಯಲ್ಲಿ ಬೇಯಿಸುವ ಈ ತಿನಿಸಿನಲ್ಲಿ ಕೊಬ್ಬಿನಂಶ ಇಲ್ಲ. ಜೊತೆಗೆ ಇದೊಂದು ಆರೋಗ್ಯ ಪೂರ್ಣ ತಿಂಡಿ ಎಂದು ಹೇಳಬಹುದು.
ಬೇಕಾಗುವ ಸಾಮಗ್ರಿಗಳು :
ತೊಗರಿ ಬೇಳೆ – 1 ಬೌಲ್, ನೀರು -1/2 ಲೀಟರ್+ 3 ಕಪ್, ಚಿಕ್ಕ ಗಾತ್ರದ ಹಸಿ ಮೆಣಸಿನಕಾಯಿ (ಖಾರಕ್ಕೆ ಬೇಕಾದಷ್ಟು) ಸಿಪ್ಪೆ ತೆಗೆದ ಶುಂಠಿ (ಒಂದು ಇಂಚು) ತೆಂಗಿನ ತುರಿ -1 ಕಪ್, ಹೆಚ್ಚಿಕೊಂಡ ತೆಂಗಿನ ಕಾಯಿ -1/2 ಕಪ್, ಹೆಚ್ಚಿಕೊಂಡ ಸಬ್ಬಸ್ಸಿಗೆ ಸೊಪ್ಪು – 2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ – 2 ಟೀ ಚಮಚ, ಎಣ್ಣೆ ಸ್ವಲ್ಪ.
ಮಾಡುವ ವಿಧಾನ :
ಒಂದು ದೊಡ್ಡ ಮಿಶ್ರಣದ ಪಾತ್ರೆಗೆ ತೊಗರಿ ಬೇಳೆಯನ್ನು ಹಾಕಿ. ಇದಕ್ಕೆ 3 ಕಪ್ ನೀರನ್ನು ಬೆರೆಸಿ, 5-6 ಗಂಟೆಗಳ ಕಾಲ ನೆನೆಯಲು ಬಿಡಿ.
ಮಿಕ್ಸಿ ಗೆ ಹಸಿಮೆಣಸಿನಕಾಯಿ, ಶುಂಠಿ, ನೆನೆಸಿಕೊಂಡ ಬೇಳೆಯನ್ನು ಒಂದು ಸೌಟ್ ಅಷ್ಟು ಪ್ರಮಾಣದಲ್ಲಿ ತೆಗೆದುಕೊಂಡು ಜರಿಜರಿಯಾಗಿ ರುಬ್ಬಿಗೊಳ್ಳಬೇಕು. ನಂತರ ಒಂದು ಬೌಲ್ಗೆ ವರ್ಗಾಯಿಸಿ. ಅದೇ ಮಿಕ್ಸಿ ಪಾತ್ರೆಯಲ್ಲಿ ಇನ್ನೊಂದು ಸೌಟ್ ನೆನೆಸಿದ ಬೇಳೆಯನ್ನು ಬೆರೆಸಿ, ಜರಿಜರಿಯಾಗಿ ರುಬ್ಬಿಕೊಳ್ಳಿ. ಮೊದಲು ರುಬ್ಬಿಕೊಂಡ ಮಿಶ್ರಣಕ್ಕೆ ಇದನ್ನು ವರ್ಗಾಯಿಸಿ.
ಇದೇ ವಿಧಾನದಲ್ಲಿ ನೆನೆಸಿಕೊಂಡ ಎಲ್ಲಾ ಬೇಳೆಯನ್ನು ರುಬ್ಬಿಕೊಂಡು ಮಿಶ್ರಣದ ಬೌಲ್ಗೆ ವರ್ಗಾಯಿಸಿ. ನಂತರ ತೆಂಗಿನ ತುರಿ ಹಾಗೂ ಹೆಚ್ಚಿಕೊಂಡ ತೆಂಗಿನಕಾಯಿಯನ್ನು ಸೇರಿಸಿ. ಸಬ್ಬಸ್ಸಿಗೆ ಸೊಪ್ಪು, ಉಪ್ಪು, ಜೀರಿಗೆಯನ್ನು ಬೆರೆಸಿ ಪುನಃ ಕಲಸಿ ಪಕ್ಕಕ್ಕಿಡಿ.
ಇಡ್ಲಿ ಕುಕ್ಕರ್‌ನಲ್ಲಿ ಅರ್ಧ ಲೀಟರ್ ನೀರನ್ನು ಹಾಕಿ ಕುದಿಯಲು ಬಿಡಿ. ಮಿಶ್ರಣವನ್ನು ತೆಗೆದುಕೊಂಡು ಅಂಗೈನಲ್ಲಿ ಸಣ್ಣ ಸಣ್ಣ ಅಂಡಾಕಾರದ ಉಂಡೆಯನ್ನಾಗಿ ಮಾಡಿ ಇಡ್ಲಿ ಕುಕ್ಕರ್ ನಲ್ಲಿ 15 ನಿಮಿಷ ಬೇಯಿಸಿ. ಬಿಸಿ ಬಿಸಿ ನುಚ್ಚಿನುಂಡೆ ಈಗ ಸವಿಯಲು ರೆಡಿ.