ಉತ್ತರ ಕನ್ನಡ ಪ್ರಕೃತಿಯ ಸೌಂದರ್ಯದ ಮೂಲಕವೇ ಜನರ ಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಂದರ ಜಿಲ್ಲೆ. ಇಂತಹ ಉತ್ತರ ಕನ್ನಡದ ಶಿರಸಿ ಸಮೀಪದಲ್ಲಿ ಝುಳು ಝುಳು ನಾದಗೈಯುತ್ತಾ ವೈಯ್ಯಾರವಾಗಿ ಹರಿಯುವ ಶಾಲ್ಮಲಾ ನದಿ ತನ್ನ ನೀರಿನ ಹರಿವಿನ ಜತೆಗೆ ಶಿವರಾತ್ರಿಯ ದಿನದಂದು ಶಿವಭಕ್ತರನ್ನು ತನ್ನೆಡೆಗೆ ಸೂಜಿಗಲ್ಲಿನಂತೆ ಸೆಳೆಯುವ ಶಕ್ತಿ ಕ್ಷೇತ್ರವೂ ಹೌದು.
ಶಿರಸಿ ಸಮೀಪದ ಸಹಸ್ರಲಿಂಗ ಶಿವನ ಆರಾಧನೆಗೆ ಅತ್ಯಂತ ಪ್ರಶಸ್ತ ತಾಣವಾಗಿದ್ದು, ಶಾಲ್ಮಲಾ ನದಿಯ ಮಧ್ಯದ ಬಂಡೆಗಳ ಮೇಲಿರುವ ಅಸಂಖ್ಯಾತ ಶಿವಲಿಂಗಗಳು ಸಾಕ್ಷಾತ್ ಪರಶಿವನೇ ಧರೆಗಿಳಿದಿದ್ದಾನೆಯೋ ಎಂಬ ಭಾವನೆ ಮೂಡಿಸುತ್ತದೆ.
ಒಂದೆಡೆ ದಟ್ಟ ಅರಣ್ಯಗಳ ನಡುವೆ ಸೂರ್ಯ ನಾಚಿ ನೋಡುತ್ತಿದ್ದಾನೆಯೋ ಎಂಬಂತೆ ಕಂಡುಬಂದರೆ, ಮತ್ತೊಂದೆಡೆ ವಯ್ಯಾರವಾಗಿ ಹರಿದು ಬರುವ ಶಾಲ್ಮಲಾ ನದಿ ಮನದ ನೋವನ್ನು ಮರೆಸುತ್ತದೆ. ಇನ್ನು ಶಿವರಾತ್ರಿಯ ದಿನದಂದು ಇಲ್ಲಿ ಕಂಡು ಬರುವ ಭಕ್ತರ ಭಕ್ತಿ ಪರವಶತೆ ನಮ್ಮನ್ನು ಆಧ್ಯಾತ್ಮ ಲೋಕಕ್ಕೆ ಒಯ್ಯುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಶಾಲ್ಮಲ ನದಿಯ ಪಾತ್ರದಲ್ಲಿ ನದಿಯ ಮಧ್ಯೆ ಇರುವ ಕಲ್ಲು ಬಂಡೆಗಳ ಮೇಲೆ ನೂರಾರು ಶಿವಲಿಂಗಗಳಿದ್ದು, ಪ್ರತಿನಿತ್ಯವೂ ಇಲ್ಲಿಗೆ ಬರುವ ಪ್ರವಾಸಿಗರು ಭಕ್ತಿಯಿಂದ ಇಲ್ಲಿರುವ ಶಿವಲಿಂಗಗಳಿಗೆ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಅದರಲ್ಲಿಯೂ ಶಿವರಾತ್ರಿಯ ದಿನದಂದು ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಬಂದು ಇಲ್ಲಿಯೇ ಸ್ನಾನ ಮಾಡಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.
ಏನಿದರ ಹಿನ್ನೆಲೆ..?
ಪ್ರತಿಯೊಂದು ಕ್ಷೇತ್ರಕ್ಕೆ ಇರುವಂತೆ ಇದಕ್ಕೂ ಇತಿಹಾಸದ ಕಥೆಗಳು ಇಲ್ಲಿನ ಮಹಿಮೆಯನ್ನು ಸಾರುತ್ತಿದ್ದು, ಕ್ರಿ.ಶ 1678 ರಿಂದ 1718 ರವರೆಗೆ ಇಲ್ಲಿ ಆಳ್ವಿಕೆ ನಡೆಸಿದ್ದ ಸೋದೆಯ ಮೊದಲ ದೊರೆ ಅರಸಪ್ಪ ನಾಯ್ಕರಿಗೆ ಮಕ್ಕಳಿರಲಿಲ್ಲ. ಹಾಗಾಗಿ ದೇವರು ತಮಗೆ ಸಂತಾನ ಭಾಗ್ಯ ಕರುಣಿಸಿದರೆ ಶಾಲ್ಮಲಾ ನದಿಯಲ್ಲಿ ಶಿವಲಿಂಗ ನಿರ್ಮಿಸುತ್ತೇನೆ ಎಂದು ಶಿವನಲ್ಲಿ ಹರಕೆ ಹೊತ್ತಿದ್ದರಂತೆ. ಇದೇ ಕಾರಣಕ್ಕೆ ಒಂದೆರಡು ಶಿವಲಿಂಗವನ್ನು ಕೆತ್ತಿಸಿದರಂತೆ. ತದನಂತರ ಆಡಳಿತಕ್ಕೆ ಬಂದ ಶಿವಭಕ್ತನಾಗಿದ್ದ ದೊರೆ ಸದಾಶಿವರಾಯರ ಆಡಳಿತ ಕಾಲದಲ್ಲಿ ಅಂದರೆ 1688 ರ ವೈಶಾಖ ಮಾಸದಲ್ಲಿ ಸಹಸ್ರಲಿಂಗಗಳನ್ನು ಕೆತ್ತಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದ ಎಂದು ಶಾಸನವೊಂದು ತಿಳಿಸುತ್ತದೆ.
ಅಲ್ಲಿಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ಇಲ್ಲಿ ಬಂದು ಪೂಜೆ ಸಲ್ಲಿಸುತ್ತಾ ಬಂದಿದ್ದು, ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದ ಸಂತಾನ ರಹಿತರಿಗೆ ಮಕ್ಕಳಾದ ಉದಾಹರಣೆಗಳೂ ಸಾಕಷ್ಟಿವೆ ಎಂಬುದು ಸ್ಥಳೀಯರ ಅಭಿಪ್ರಾಯ.
ಏನೇ ಇರಲಿ, ಸಹಸ್ರಲಿಂಗ ಎನ್ನುವುದು ಕೇವಲ ಪ್ರವಾಸಿ ತಾಣವಾಗಿರದೇ ಭಕ್ತರ ಅಭಿಲಾಷೆಯನ್ನು ತೀರಿಸುವ ಅದರಲ್ಲಿಯೂ ಶಿವರಾತ್ರಿಯ ದಿನದಂದು ಶಿವ ಆರಾಧನೆಗೆ ಅತ್ಯಂತ ಸೂಕ್ತವಾದ ಸ್ಥಳ ಎಂಬುದು ಸಾರ್ವಕಾಲಿಕ ಸತ್ಯ. ಶಿರಸಿಯಿಂದ ಇಪ್ಪತ್ತು ಕಿ.ಮೀ. ದೂರದಲ್ಲಿರುವ ಈ ಪ್ರದೇಶಕ್ಕೆ ಸಾಕಷ್ಟು ವಾಹನ ವ್ಯವಸ್ಥೆಯೂ ಇದ್ದು, ಹತ್ತಿರದಲ್ಲಿಯೇ ಇರುವ ಸ್ವರ್ಣವಲ್ಲೀ ಮಹಾಸಂಸ್ಥಾನ ಹಾಗೂ ಸೋದೆ ಮಠಗಳಿಗೂ ಭೇಟಿ ನೀಡಬಹುದಾಗಿದೆ.