ಮಹಿಳೆಯರ ಪಾಲಿಗೆ ವಿಚ್ಛೇದನದ ನಿರ್ಧಾರ ಸುಲಭವಲ್ಲ. ಸ್ತ್ರೀ ತಾಳ್ಮೆಯ ಪ್ರತೀಕ, ಸಹಿಸಿ ಸಹಿಸಿ ಸುಸ್ತಾಗಿ ಇನ್ನು ಸಾಧ್ಯವಿಲ್ಲ ಎನಿಸಿದಾಗ ಮಾತ್ರ ಆಕೆ ಸಂಗಾತಿಯಿಂದ ಬೇರೆಯಾಗುವ ನಿರ್ಧಾರಕ್ಕೆ ಬರುತ್ತಾಳೆ. ಸಮಸ್ಯೆ ಬಗೆಹರಿಯುವುದು ಅಸಾಧ್ಯ ಎನಿಸಿದಾಗ ಸಮಾಜ, ಮನೆಯವರು, ಸಂಬಂಧಿಕರು ಏನೇ ಹೇಳಿದರೂ ಗಂಡನಿಗೆ ವಿಚ್ಛೇದನ ನೀಡಲು ನಿರ್ಧರಿಸುತ್ತಾಳೆ. ಹಾಗಾದರೆ ಮಹಿಳೆ ಇಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣಗಳೇನು ಅನ್ನೋದನ್ನು ತಿಳಿದುಕೊಳ್ಳೋಣ.
ಮೋಸವನ್ನು ಸಹಿಸಲು ಅಸಾಧ್ಯ : ಹೆಣ್ಣು ಎಂತಹ ಕಷ್ಟವನ್ನಾದ್ರೂ ಎದುರಿಸ್ತಾಳೆ. ಆದರೆ ಗಂಡನಿಗೆ ಅನೈತಿಕ ಸಂಬಂಧವಿದ್ದರೆ ಅದನ್ನೆಂದಿಗೂ ಒಪ್ಪಿಕೊಳ್ಳುವುದಿಲ್ಲ. ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಮೋಸವನ್ನು ಸಹಿಸಲು ಸಾಧ್ಯವಾಗುವುದಿಲ್ಲ.
ಸ್ವಾಭಿಮಾನದಲ್ಲಿ ರಾಜಿಯೇ ಇಲ್ಲ : ಸ್ವಾಭಿಮಾನದ ವಿಚಾರದಲ್ಲಿ ಯಾರೂ ರಾಜಿಮಾಡಿಕೊಳ್ಳಲು ಸಿದ್ಧರಿರುವುದಿಲ್ಲ. ಪತಿ, ಸ್ವಾಭಿಮಾನವನ್ನು ಕೆಣಕಿದಾಗ, ಧಕ್ಕೆ ತಂದಾಗ ಸ್ತ್ರೀ ಸಿಡಿದೇಳ್ತಾಳೆ. ಕೆಲವೊಮ್ಮೆ ಇದೇ ವಿಷಯಕ್ಕೆ ವಿಚ್ಛೇದನದ ನಿರ್ಧಾರಕ್ಕೆ ಬರ್ತಾಳೆ.
ಹೆಂಡತಿಯ ಕನಸಿನ ಬಗ್ಗೆ ಯೋಚಿಸದೇ ಇರುವುದು : ವಿಚ್ಛೇದನ ಪಡೆಯಲು ಮೂರನೇ ಕಾರಣವೆಂದರೆ ಮಹಿಳೆಯ ಕನಸುಗಳಿಗೆ ಬೀಗ ಹಾಕುವುದು. ಮದುವೆಯ ನಂತರ ಗಂಡ ತನ್ನ ಹೆಂಡತಿಯ ವೃತ್ತಿಯ ಬಗ್ಗೆ ಯೋಚಿಸದೆ ಅವಳನ್ನು ಅಡುಗೆಮನೆಯ ಕೆಲಸದಲ್ಲಿ ಮಾತ್ರ ಬ್ಯುಸಿಯಾಗಿಸಿದಾಗ ಅವಳು ಬೇಸತ್ತು ಹೋಗ್ತಾಳೆ. ಮದುವೆಯ ನಂತರ ಗಂಡನಿಂದ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರ್ತಾಳೆ. ಅದ್ಯಾವುದೂ ಈಡೇರದಿದ್ದಾಗ ಪತಿಯನ್ನೇ ತೊರೆಯುವ ನಿರ್ಧಾರಕ್ಕೆ ಬರ್ತಾಳೆ.
ಮಾನಸಿಕ ತೊಳಲಾಟ : ಮದುವೆಯಾದ ನಂತರ ಹೆಣ್ಣಿನ ಜವಾಬ್ದಾರಿ ಹೆಚ್ಚುತ್ತದೆ. ಅದನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದರೆ ಆಕೆ ಚಿಂತಿತಳಾಗ್ತಾಳೆ. ಮಾನಸಿಕವಾಗಿ ಕುಗ್ಗಿ ಹೋಗ್ತಾಳೆ. ಅಂತಹ ಪರಿಸ್ಥಿತಿಯಲ್ಲಿ ಪತಿಯೂ ಅವಳನ್ನು ಅರ್ಥಮಾಡಿಕೊಳ್ಳದಿದ್ದರೆ, ಕ್ರಮೇಣ ಮಾತು ಕಡಿಮೆ ಮಾಡ್ತಾಳೆ. ಅಂತಹ ಪರಿಸ್ಥಿತಿಯಲ್ಲಿ ವಿಚ್ಛೇದನದ ನಿರ್ಧಾರಕ್ಕೆ ಬರ್ತಾಳೆ.