ನವದೆಹಲಿ : ದೇಶದಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕ ಅಕ್ಟೋಬರ್ ತಿಂಗಳಲ್ಲಿ ಶೇ. 3.2ರಷ್ಟು ಪ್ರಗತಿ ಸಾಧಿಸಿದೆ ಎಂದು ಸಾಂಖ್ಯಿಕ ಹಾಗೂ ಯೋಜನಾ ಸಚಿವಾಲಯದ ಅಂಕಿ-ಅಂಶಗಳು ಹೇಳುತ್ತಿವೆ.
2020ರ ಅಕ್ಟೋಬರ್ ನಲ್ಲಿಯೂ ಕೈಗಾರಿಕೆ ಉತ್ಪಾದನೆ ಶೇ. 4.5ರಷ್ಟು ಏರಿಕೆ ಕಂಡಿತ್ತು. ಆದರೆ, 2020ರ ಸಮಯಕ್ಕೆ ಹೋಲಿಸಿದರೆ, 2021ರಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕವು ಶೇ. 20ರಷ್ಟು ಏರಿಕೆ ಕಂಡಿದೆ.
2020ರ ಮಾರ್ಚ್ ನ ನಂತರ ಕೈಗಾರಿಕೆ ಉತ್ಪಾನೆಯಲ್ಲಿ ಹೆಚ್ಚಿನ ಕುಸಿತ ಕಂಡು ಬಂದಿತ್ತು. ಕೊರೊನಾದಿಂದಾಗಿ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಹೀಗಾಗಿ ಕೈಗಾರಿಕಾ ವಲಯದಲ್ಲಿ ಕೆಲವು ತಿಂಗಳ ಕಾಲ ಉತ್ಪಾದನೆ ಸ್ಥಗಿತಗೊಂಡಿತ್ತು. ಆನಂತರವೂ ಉತ್ಪಾದನೆಯಲ್ಲಿ ತೊಂದರೆಯಾಗಿತ್ತು. ಸರ್ಕಾರದ ಹಲವು ನಿರ್ಬಂಧ, ಕಚ್ಚಾ ವಸ್ತುಗಳ ಪೂರೈಕೆಯಲ್ಲಿನ ವ್ಯತ್ಯಯ. ಬೇಡಿಕೆ ಕಡಿಮೆಯಾಗಿದ್ದರಿಂದಾಗಿ ಕೈಗಾರಿಕಾ ಉತ್ಪಾದನೆ ಕಡಿಮೆಯಾಗಿತ್ತು.
ಸದ್ಯ ಮತ್ತೆ ಸಹಜ ಸ್ಥಿತಿಗೆ ಜನ ಜೀವನ ಬಂದಿದ್ದು, ಕೈಗಾರಿಕಾ ಉತ್ಪಾದನೆ ಪ್ರಗತಿ ಸಾಧಿಸುತ್ತಿದೆ. 2021ರ ಅಕ್ಟೋಬರ್ ಸಮಯದಲ್ಲಿ ಉತ್ಪಾದನಾ ವಲಯದ ಉತ್ಪಾದನೆಯು ಶೇ. 2ರಷ್ಟು ಹೆಚ್ಚಳವಾಗಿದೆ. ಇದೇ ಸಮಯದಲ್ಲಿ ಗಣಿಗಾರಿಕೆ ಉತ್ಪಾದನೆ ಶೇ. 11.4, ವಿದ್ಯುತ್ ಉತ್ಪಾದನೆಯಲ್ಲಿ ಶೇ. 3.1ರಷ್ಟು ಹೆಚ್ಚಳವಾಗಿದೆ.