ದೊಡ್ಡ ಬ್ಯಾನರ್, ಬಿಗ್ ಬಜೆಟ್ ಜೊತೆಗೆ ಮಾಸ್ ಹೀರೋ ಇದ್ರೆ ಸಿನೆಮಾ ಸೂಪರ್ ಹಿಟ್ ಆಗೋದು ಪಕ್ಕಾ ಅನ್ನೋ ಭಾವನೆ ಈ ಮೊದಲು ಎಲ್ಲರಲ್ಲೂ ಇತ್ತು. ಆದ್ರೀಗ ಟ್ರೆಂಡ್ ಬದಲಾಗಿದೆ. ಚಿತ್ರದ ಕಥೆ ಹಾಗೂ ಮೇಕಿಂಗ್ ಚೆನ್ನಾಗಿದ್ದರೆ ಮಾತ್ರ ಸಿನೆಮಾ ಹಿಟ್ ಆಗೋದು ಅನ್ನೋದಕ್ಕೆ ಸಾಕಷ್ಟು ತಾಜಾ ಉದಾಹರಣೆಗಳಿವೆ.
ಮಾಸ್ ಸಿನೆಮಾಗಳ ಅಬ್ಬರದ ನಡುವೆಯೂ ಪ್ರೇಕ್ಷಕರನ್ನು ಸೆಳೆಯುತ್ತಿರುವ ʼಜೂಲಿಯೆಟ್ʼ ಚಿತ್ರವೇ ಇದಕ್ಕೆ ಸಾಕ್ಷಿ. ಫೆಬ್ರವರಿ 24ರಂದು ಈ ಚಿತ್ರ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣ್ತಿರೋದು ವಿಶೇಷ. ಸ್ಟಾರ್‌ಗಳ ಅಬ್ಬರವಿಲ್ಲದ ಮಹಿಳಾ ಪ್ರಧಾನ ಚಿತ್ರವಿದು. ಅಭಿನಯ ಹಾಗೂ ಸಿಕ್ಕಾಪಟ್ಟೆ ಕುತೂಹಲಕಾರಿಯಾಗಿರೋ ಕಥೆ, ಸಸ್ಪೆನ್ಸ್ ಈ ಚಿತ್ರದ ಹೈಲೈಟ್.
ಹಾಗಾಗಿ ಸಹಜವಾಗಿಯೇ ಪ್ರೇಕ್ಷಕ ಬಂಧುಗಳಿಗೆ ಸಿನೆಮಾ ಇಷ್ಟವಾಗಿದೆ. ರಿಲೀಸ್ ಆಗಿ ಎರಡು ವಾರ ಕಳೆದಿದ್ದರೂ ಜೂಲಿಯೆಟ್ 2 ಯಶಸ್ವಿ ಪ್ರದರ್ಶನ ಕಾಣ್ತಿದೆ. ಜೂಲಿಯೆಟ್ 2 ಚಿತ್ರದಲ್ಲಿ ನಟಿ ಬೃಂದಾ ಆಚಾರ್ಯ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಸಿಕ್ಕಾಪಟ್ಟೆ ಆಕ್ಷನ್ ಸೀನ್‌ಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಬೃಂದಾ.
ಇದು ಮಹಿಳೆಯರಿಗೆ ಮಾತ್ರ ಸೀಮಿತವಾಗಿರೋ ಸಿನೆಮಾ ಅಂದ್ಕೋಬೇಡಿ, ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಕಟ್ಟಿಹಾಕುವಂತಹ ಥ್ರಿಲ್ಲರ್ ಇದು. ಸಿನೆಮಾದ ಟ್ರೈಲರ್ ಹಾಗೂ ಹಾಡುಗಳು ಈಗಾಗ್ಲೇ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದವು. ಇದೀಗ ಚಿತ್ರಕ್ಕೆ ಕೂಡ ಪ್ರೇಕ್ಷಕರು ಜೈ ಅಂದಿದ್ದಾರೆ. ಆಕ್ಷನ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಜೊತೆಗೆ ಅಪ್ಪ-ಮಗಳ ಸೆಂಟಿಮೆಂಟ್ ಕೂಡ ಈ ಸಿನೆಮಾದಲ್ಲಿದೆ.
ಜೂಲಿಯೆಟ್ 2 ಚಿತ್ರವನ್ನು ವಿರಾಟ್ ಬಿ ಗೌಡ್ ನಿರ್ದೇಶಿಸಿದ್ದಾರೆ. ಲಿಖಿತ್ ಆರ್ ಕೋಟ್ಯಾನ್ ಈ ಚಿತ್ರದ ನಿರ್ಮಾಪಕರು. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಜೂಲಿಯೆಟ್ 2 ಚಿತ್ರಕ್ಕೆ ಪ್ರೇಕ್ಷಕರು ಸೈ ಎಂದಿದ್ದಾರೆ.
ಬೃಂದಾ ಆಚಾರ್ಯ ಜೊತೆಗೆ ಶ್ರೀಕಾಂತ್ ರಾಯ್ ಸಹ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ ಹೀಗೆ ದೊಡ್ಡ ತಾರಾ ಬಳಗವೇ ಇದೆ. ಅದ್ಧೂರಿ ಚಿತ್ರಗಳ ಅಬ್ಬರದಲ್ಲೂ ಹೊಸಬರ ಈ ಪ್ರಯತ್ನ ಜನರ ಮನಗೆದ್ದಿರೋದು ವಿಶೇಷ.