ಸಿಹಿ ಅಪ್ಪಂ ಇದೊಂದು ರುಚಿಕರವಾದ ಸಿಹಿ ತಿನಿಸು. ತುಪ್ಪ, ಅಕ್ಕಿ, ಬಾಳೆಹಣ್ಣು, ಬೆಲ್ಲವಿದ್ದರೆ ಸುಲಭವಾಗಿ ಮನೆಯಲ್ಲಿ ಮಾಡಬಹುದು. ಮಕ್ಕಳಿಗೂ ಈ ತಿನಿಸು ತುಂಬಾ ಇಷ್ಟವಾಗುತ್ತದೆ. ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು. ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು
1 ಕಪ್ ಅಕ್ಕಿ, ¾ ಕಪ್ ಬೆಲ್ಲ, 2 ಬಾಳೆಹಣ್ಣು, ½ ಬೇಕಿಂಗ್ ಸೋಡಾ, 1 ದೊಡ್ಡ ಚಮಚದಷ್ಟು ತೆಂಗಿನಕಾಯಿ ತುರಿ, ½ ಟೀ ಸ್ಪೂನ್ ಏಲಕ್ಕಿ ಪುಡಿ, ತುಪ್ಪ ಸ್ವಲ್ಪ.
ಮಾಡುವ ವಿಧಾನ: ಅಕ್ಕಿಯನ್ನು ಮೂರು ಗಂಟೆ ನೀರಿನಲ್ಲಿ ನೆನೆಸಿ. ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಗ್ಯಾಸ್ ಮೇಲೆ ಇಟ್ಟು ಕರಗಿಸಿಕೊಳ್ಳಿ. ನಂತರ ಇದನ್ನು ಸೋಸಿಕೊಳ್ಳಿ. ಅಕ್ಕಿಗೆ ತುಸು ನೀರು ಸೇರಿಸಿ ರುಬ್ಬಿಕೊಳ್ಳಿ. ನಂತರ ಬೆಲ್ಲದ ನೀರನ್ನು ಹಾಕಿ ನಯವಾಗಿ ರುಬ್ಬಿಕೊಳ್ಳಿ. ಬೇಕಿದ್ದರೆ ತುಸು ನೀರು ಸೇರಿಸಿ. ಆಮೇಲೆ ಬಾಳೆ ಹಣ್ಣನ್ನು ಸೇರಿಸಿ 2 ಸುತ್ತು ರುಬ್ಬಿಕೊಳ್ಳಿ. ಈ ಮಿಶ್ರಣ ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪಗಿರಲಿ. ಏಲಕ್ಕಿ ಪುಡಿ, ತೆಂಗಿನಕಾಯಿ ತುರಿ ಸೇರಿಸಿ. ಈ ಮಿಶ್ರಣವನ್ನು ಎರಡು ಗಂಟೆ ಹಾಗೆಯೇ ಇಟ್ಟುಬಿಡಿ.
ನಂತರ ಬೇಕಿಂಗ್ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಪ್ಪಂ ತವಾವನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ತುಪ್ಪ ಸವರಿ. ಈ ಮಿಶ್ರಣವನ್ನು ಚಮಚದ ಸಹಾಯದಿಂದ ಹಾಕಿ. ಎರಡು ಕಡೆ ಚೆನ್ನಾಗಿ ಬೇಯಿಸಿಕೊಂಡರೆ ಸಿಹಿ ಅಪ್ಪಂ ಸವಿಯಲು ರೆಡಿ.