ಬಾಯಿರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಸಿರಿಧಾನ್ಯ. ಆರ್ಕ, ನವಣೆ, ಸಾಮೆ, ಕೊರ್ಲೆ, ಊದಲು ಮೊದಲಾದವುಗಳನ್ನು ಬಳಸಿ ಅಡುಗೆ ಮಾಡುವುದನ್ನು ಸಿರಿಧಾನ್ಯದ ಪಾಕ ಅಥವಾ ಸಿರಿಪಾಕ ಎಂದು ಕರೆಯಲಾಗುತ್ತದೆ. ಸಿರಿಧಾನ್ಯದ ನುಚ್ಚಿನುಂಡೆಯನ್ನು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಯಾವುದಾದರೊಂದು ಸಿರಿಧಾನ್ಯ-1 ಬಟ್ಟಲು, ಉದ್ದಿನ ಬೇಳೆ, ಕಡ್ಲೆ ಬೇಳೆ, ಹೆಸರು ಬೇಳೆ, ತೊಗರಿ ಬೇಳೆ ತಲಾ 1 ಬಟ್ಟಲು, ಉಪ್ಪು, ಮೆಣಸಿನ ಕಾಯಿ, ತೆಂಗಿನ ಕಾಯಿ ತುರಿ, ಜೀರಿಗೆ, ಕೊತಂಬರಿ ಸೊಪ್ಪು.
ತಯಾರಿಸುವ ವಿಧಾನ:
ನೀವು ತೆಗೆದುಕೊಂಡ ಸಿರಿಧಾನ್ಯವನ್ನು 10 ಗಂಟೆ ನೆನೆಸಿರಿ. ಕಡ್ಲೆ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ತೊಗರಿಬೇಳೆ 4 ಗಂಟೆ ನೆನೆಸಿದ ಬಳಿಕ, ಎಲ್ಲವನ್ನೂ ಬೆರೆಸಿರಿ. ನೀರನ್ನು ಬಸಿದು, ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನ ಕಾಯಿ ತುರಿ, ಮೆಣಸಿನಕಾಯಿ, ಕೊತಂಬರಿ ಸೊಪ್ಪು, ಜೀರಿಗೆ ಹಾಕಿ ತರಿ ತರಿಯಾಗಿ ಕಲೆಸಿಕೊಳ್ಳಿ. ನಿಮಗೆ ಬೇಕಾದ ಗಾತ್ರಕ್ಕೆ ಉಂಡೆ ಮಾಡಿಕೊಂಡು ಹಬೆಯಲ್ಲಿ 15 ನಿಮಿಷ ಬೇಯಿಸಿಕೊಂಡು ಚಟ್ನಿಯೊಂದಿಗೆ ತಿನ್ನಿರಿ.