ಹಲಸಿನ ಹಣ್ಣು ಯಥೇಚ್ಚವಾಗಿ ಸಿಗುವ ಕಾಲದಲ್ಲಿ ಇದರಿಂದ ನಾನಾ ಬಗೆಯ ಖಾದ್ಯಗಳನ್ನು ಮಾಡಿ ಸವಿಯಬಹದು. ಇಲ್ಲಿ ಸುಲಭವಾಗಿ ಹಲಸಿನಹಣ್ಣಿನ ಹಲ್ವಾ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಹಲಸಿನ ಹಣ್ಣಿನ ತೊಳೆ – 10, ½ ಕಪ್ – ಬೆಲ್ಲ, ದ್ರಾಕ್ಷಿ – 2 ಚಮಚ, ಬಾದಾಮಿ, ಗೋಡಂಬಿ – 2 ಟೇಬಲ್ ಸ್ಪೂನ್, 4 ಟೇಬಲ್ ಸ್ಪೂನ್ – ತುಪ್ಪ, ಚಿಟಿಕೆ – ಏಲಕ್ಕಿ ಪುಡಿ, ಗೋಧಿಹಿಟ್ಟು – 2 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಹಲಸಿನಹಣ್ಣಿನ ತೊಳೆಗಳನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ಬೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ¼ ಕಪ್ ನೀರು ಹಾಕಿ ಕರಗಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ಗೋಡಂಬಿ, ದ್ರಾಕ್ಷಿ, ಬಾದಾಮಿ ಹಾಕಿ ಹುರಿದುಕೊಂಡು ಒಂದು ಪ್ಲೇಟ್ ಗೆ ಹಾಕಿ ತೆಗೆದಿಟ್ಟುಕೊಳ್ಳಿ.
ನಂತರ ಅದೇ ಪ್ಯಾನ್ ಗೆ ಗೋಧಿಹಿಟ್ಟು ಹಾಕಿ ಸ್ವಲ್ಪ ಪರಿಮಳ ಬರುವವರಗೆ ಹುರಿದುಕೊಳ್ಳಿ. ಇದಕ್ಕೆ ರುಬ್ಬಿದ ಹಲಸಿನಹಣ್ಣಿನ ಮಿಶ್ರಣ ಹಾಕಿ ನಂತರ ಬೆಲ್ಲದ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ತಳ ಬಿಡುವವರೆಗೆ ಚೆನ್ನಾಗಿ ಕೈಯಾಡಿಸುತ್ತಾ ಇರಿ. ಕೊನೆಗೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ. ದ್ರಾಕ್ಷಿ, ಗೋಡಂಬಿ, ಬಾದಾಮಿ, ಏಲಕ್ಕಿ ಸೇರಿಸಿ ಗ್ಯಾಸ್ ಆಫ್ ಮಾಡಿ.