ಅಪ್ಪನ ಹಾದಿಯಲ್ಲಿ ಕೆಲದೂರ ಸಾಗಿ ಮುಂದೆ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ಯಶಸ್ಸಿನ ಉತ್ತುಂಗಕ್ಕೇರುವ ಸಾಹಸಗಾಥೆಯ ಚಿತ್ರಣವೇ ‘ವಿಜಯಾನಂದ’.
ಉದ್ಯಮಿ, ರಾಜಕಾರಣಿ, ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರ ಯಶಸ್ವಿ ಬದುಕಿನ ಪಯಣದ ಕಥೆಯಿದು. ಇಲ್ಲಿ ಗೆಲುವಿಗಷ್ಟೇ ಜಾಗ ಎಂಬಂತೆ ವಿಜಯ ಸಂಕೇಶ್ವರರ ಗೆಲುವಿನ ಕಥೆಯನ್ನು ತೆರೆಮೇಲೆ ತರುವ ಪ್ರಯತ್ನವೇ ಈ ಚಿತ್ರ.
ಬಯೋಪಿಕ್ ಸಿನಿಮಾಗಳು ಹೆಚ್ಚಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬ ಕೊರಗನ್ನು ನೀಗಿಸಿರುವ ಚಿತ್ರವಿದು.
ವಿಜಯ ಸಂಕೇಶ್ವರರ ಬದುಕಿನ ನೈಜ ಘಟನೆಯನ್ನು 2.40 ಗಂಟೆಗಳಲ್ಲಿ ಪ್ರಯತ್ನ ಮಾಡಲಾಗಿದೆ. ಪ್ರತಿ ಸವಾಲು ಎದುರಾದಾಗಲೂ ಗೆಲ್ಲುತ್ತಲೇ ಸಾಗುತ್ತಾ ಎದುರಿರುವವರಿಗೆ ಸ್ಫೂರ್ತಿಯ ಚಿಲುಮೆಯಾಗುವ ಕಥಾಹಂದರವನ್ನು ಚಿತ್ರ ಒಳಗೊಂಡಿದೆ. ಸಿನಿಮಾಕ್ಕೆ ಒಂದಿಷ್ಟು ವಾಣಿಜ್ಯಿಕ ಮನೋರಂಜನಾತ್ಮಕ ಅಂಶಗಳನ್ನೂ ಬೆರೆಸಲಾಗಿದೆ.
ವಿಜಯ ಸಂಕೇಶ್ವರ ತಮ್ಮ ತಂದೆ ಬಿ.ಜಿ. ಸಂಕೇಶ್ವರರ ಪ್ರಿಂಟಿಂಗ್ ಉದ್ಯಮವನ್ನು ನೋಡಿಕೊಳ್ಳುತ್ತಿರುತ್ತಾರೆ. ನಂತರ ತಂದೆಯ ಹಳೆಯ ಮಾದರಿ ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ನಿಧಾನ ಎಂದು ಅರಿತು ಹೊಸದೊಂದು ಸೆಮಿ ಆಟೊಮ್ಯಾಟಿಕ್ ಪ್ರಿಂಟಿಂಗ್ ಯಂತ್ರ ತರುತ್ತಾರೆ. ಆದರೆ ಅದ್ಯಾಕೋ ಸರಿಬರದ ಕಾರಣ, ತಂದೆಯ ವಿರೋಧ ಕಟ್ಟಿಕೊಂಡು ಸಾರಿಗೆ ವ್ಯಾಪಾರ ಆರಂಭಿಸಲು ಹೊರಡುತ್ತಾರೆ.
ಆಗ ಅವರ ಬದುಕಿನಲ್ಲಿ ಎದುರಾಗುವ ಸವಾಲುಗಳು ಏನು? ಒಂದು ಲಾರಿಯಿಂದ ಶುರುವಾಗುವ ಅವರ ಸಾರಿಗೆ ಉದ್ಯಮದ ಪಯಣ ಹೆಚ್ಚುತ್ತಲೇ ಸಾಗಿ ಯಶಸ್ಸಿನ ಉತ್ತುಂಗಕ್ಕೆ ಏರಿದ್ದು ಹೇಗೆ? ತಮ್ಮ ಲಾರಿ ಉದ್ಯಮವನ್ನು ಬೆಳೆಸಲು ವಿಜಯ್ ಸಂಕೇಶ್ವರ ಅವರು ಮಾಡಿದ ಹೋರಾಟ, ಶ್ರಮದ ಕಥನ ಬಹು ಕುತೂಹಲಕಾರಿಯೂ, ಸ್ಫೂರ್ತಿದಾಯಕವಾಗಿಯೂ ಹೇಗೆ ಆಗುತ್ತದೆ ಎಂದು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕಿ ರಿಷಿಕಾ ಶರ್ಮಾ.
ನಂತರದ ಭಾಗ ಶುರುವಾಗುವುದು ಅವರ ಪತ್ರಿಕೋದ್ಯಮದ ಜೀವನದತ್ತ. ತಮ್ಮನ್ನು ಹೀಗಳೆದಿದ್ದಕ್ಕೆ ದಿನಪತ್ರಿಕೆಯೊಂದನ್ನೇ ಆರಂಭಿಸುವ ಪಣ ತೊಟ್ಟು ಅದನ್ನು ನಂ.1 ಸ್ಥಾನದಲ್ಲಿ ನಿಲ್ಲಿಸಿರುವ ಯಶಸ್ಸಿನ ಕಥೆಯನ್ನು ಇಲ್ಲಿ ಹೇಳಲಾಗಿದೆ.
ಒಟ್ಟಾರೆಯಾಗಿ, ತಮ್ಮನ್ನು ವಿರೋಧಿಸುವವರನ್ನು ಸಹ ಯಶಸ್ಸಿನಿಂದಲೇ ಗೆಲ್ಲಬೇಕು, ಆತ್ಮವಿಶ್ವಾಸ, ಶ್ರಮ ಎರಡೂ ಜತೆಗಿದ್ದರೆ ಗೆಲುವು ಖಂಡಿತಾ ನಿಮ್ಮದಾಗುತ್ತದೆ ಎಂಬ ಸಂದೇಶವನ್ನು ಸಿನಿಮಾದಲ್ಲಿ ನೀಡಲಾಗಿದೆ.
ವಿಜಯ ಸಂಕೇಶ್ವರ ಅವರ ಪುತ್ರ ಆನಂದ್ ಸಂಕೇಶ್ವರ ಅವರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಛಾಯಾಗ್ರಹಣ ಉತ್ತಮವಾಗಿದೆ. 1970-80ರ ಕಾಲಘಟ್ಟವನ್ನು ನಿರ್ದೇಶಕರು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ವಾಹನಗಳ ಸಾಲು, ಸಂಕೇಶ್ವರ ಸಾಮ್ರಾಜ್ಯವನ್ನು ತೋರಿಸಿದೆ. ಲಾರಿ ಉದ್ಯಮದ ಕತೆಯಷ್ಟು ವಿಸ್ತಾರವಾಗಿ ಪತ್ರಿಕೋದ್ಯಮಕ್ಕೆ ಚಿತ್ರದಲ್ಲಿ ಅಷ್ಟು ಅವಕಾಶ ಇಲ್ಲವೆಂಬ ಕೊರಗು ಚಿತ್ರಕ್ಕಿದೆ. ಮೊದಲ ಅರ್ಧದ ಭಾಗದಲ್ಲಿಷ್ಟು ರೋಚಕತೆಯನ್ನು ಎರಡನೇ ಅರ್ಧಭಾಗದಲ್ಲಿ ಅಷ್ಟಾಗಿ ಕಾಪಾಡಿಕೊಂಡಿಲ್ಲ.
ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಟಿಸಿರುವ ನಿಹಾಲ್ ರಜಪೂತ್ ಚೆನ್ನಾಗಿ ನಟಿಸಿದ್ದಾರೆ. ನಟ ಅನಂತ್ ನಾಗ್ ಅಭಿನಯ ಮನೋಜ್ಞವಾಗಿದೆ. ರವಿಚಂದ್ರನ್ ಪಾತ್ರ ಚಿಕ್ಕದಾದರೂ ಇಷ್ಟವಾಗುತ್ತದೆ. ಇನ್ನುಳಿದಂತೆ ಶೈನ್ ಶೆಟ್ಟಿ, ದಯಾಳ್ ಪದ್ಮನಾಭ್, ವಿಲನ್ ಪಾತ್ರಧಾರಿ ಪ್ರಕಾಶ್ ಬೆಳವಾಡಿ ಎಲ್ಲರೂ ಪಾತ್ರಕ್ಕನುಗುಣವಾಗಿ ಚೆನ್ನಾಗಿ ನಟಿಸಿದ್ದಾರೆ.