ಕರ್ನಾಟಕದಲ್ಲಿ ಶಕ್ತಿ ದೇವತೆಗಳ ಆಲಯಗಳು ಎಲ್ಲೆಡೆಯಿದ್ದು, ಅಪಾರ ಜನ ಪೂಜಿಸುವ ಆಲಯಗಳಾಗಿ ಇವು ಪ್ರಸಿದ್ಧಿ ಪಡೆದಿವೆ. ಇಂತಹುದೇ ಒಂದು ಅಪಾರವಾದ ಭಕ್ತಿ ಕೇಂದ್ರ ಸವದತ್ತಿ.
ಉತ್ತರ ಕರ್ನಾಟಕದ ಜನರ ಪಾಲಿಗೆ ಆರಾಧ್ಯ ದೈವ, ಶ್ರೀ ರಕ್ಷೆ ನೀಡುವ ಮಾತೆ ಸವದತ್ತಿಯ ರೇಣುಕಾ ಎಲ್ಲಮ್ಮ ದೇವಿ. ಪುರಾಣ ಕತೆಗಳ ಅನುಸಾರವಾಗಿ ಹೇಳುವುದಾದರೆ ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಪರಶುರಾಮ ಇದೇ ಸ್ಥಳದಲ್ಲಿ ತಪಸ್ಸಾನ್ನಾಚರಿಸಿದರೆಂಬ ನಂಬಿಕೆಯಿದೆ.
ದೇವಾಲಯದಿಂದ ಸ್ವಲ್ಪ ದೂರದಲ್ಲಿರುವ ಜೋಗುಳ ಬಾವಿಯ ನೀರನ್ನು ಜನರು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಂಡು ದೇವಾಲಯಕ್ಕೆ ಕಾಲಿಡುತ್ತಾರೆ. ಆ ಪವಿತ್ರ ಜಲದಿಂದ ರೋಗ ರುಜಿನಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಅರಿಷಿಣ ಇಲ್ಲಿನ ಭಕ್ತರಿಗೆ ನೀಡುವ ವಿಶೇಷ ಪ್ರಸಾದ. ಭಕ್ತರ ಪಾಲಿಗೆ ಆಕೆ ಸರ್ವ ಶಕ್ತೆ. ಬೇಡಿದ್ದೆಲ್ಲ ಕೊಡುವ ದೇವತೆ.
ಸವದತ್ತಿಯು ಬೆಳಗಾವಿ ಜಿಲ್ಲೆಯಲ್ಲಿದೆ. ಇದು ಧಾರವಾಡದಿಂದ ಸುಮಾರು 35 ಕಿ.ಮೀ. ಅಂತರದಲ್ಲಿದೆ. ಸವದತ್ತಿಯಿಂದ 7 ಕಿ.ಮೀ. ದೂರದಲ್ಲಿ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನವಿದೆ. ತಲುಪಲು ಸಾಕಷ್ಟು ಬಸ್ ವ್ಯವಸ್ಥೆ ಇದೆ.