ಇಷ್ಟು ದಿನ ನೀವು ಮನೆ ಮುಂದೆ ನಿಲ್ಲಿಸಿದ ವಾಹನಗಳು ಕಳುವಾಗುವ ಸುದ್ದಿಯನ್ನು ಕೇಳಿರುತ್ತೀರಾ. ಆದರೆ ಇಲ್ಲೊಬ್ಬ ಖತರ್ನಾಕ್ ಕಳ್ಳ ಕಾರು ಸರ್ವೀಸ್ ಸ್ಟೇಷನ್ನಿಂದಲೇ ಕಾರನ್ನು ಕದ್ದು ಪರಾರಿಯಾಗಿದ್ದಾನೆ.
ಬ್ಯಾಟರಾಯನಪುರ ವ್ಯಾಪ್ತಿಯ ಗೋಪಾಲ್ ಆರ್ಕೇಡ್ ಬಳಿ ಇರುವ ಸರ್ವೀಸ್ ಸ್ಟೇಷನ್ನಲ್ಲಿದ್ದ ಕಾರು ಕಳುವಾಗಿದ್ದು, ಈ ಬಗ್ಗೆ ಕಾರಿನ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.
ಸರ್ವಿಸ್ ಸ್ಟೇಷನ್ ಸಿಬ್ಬಂದಿ ರಸ್ತೆ ಮುಂಭಾಗದಲ್ಲಿ ಹ್ಯಾರಿಯರ್. ನಿಲ್ಲಿಸಿ ಬೇರೆ ಕೆಲಸ ಮಾಡುತ್ತಿದ್ದ ವೇಳೆ ಕಾರು ಕಳ್ಳತನವಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಜೊತೆಗೆ ಕಾರು ಕಳುವಾದ ಬಗ್ಗೆ ಸರ್ವಿಸ್ ಸ್ಟೇಷನ್ ಸಿಬ್ಬಂದಿ ಕೂಡ ದೂರು ದಾಖಲಿಸಿದ್ದಾರೆ.
ದೂರು ಸ್ವೀಕರಿಸಿದ ಬ್ಯಾಟರಾಯನಪುರ ಪೊಲೀಸರು, ಕಾರ್ಯಾಚರಣೆ ನಡೆಸಿ ಒಬ್ಬ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ನಜೀರ್ ಅಹ್ಮದ್ ಬಂಧಿತ ಆರೋಪಿ. ಇನ್ನು ಆರೋಪಿಯಿಂದ 21ಲಕ್ಷ ಮೌಲ್ಯದ ಕಾರು ಹಾಗೂ ಎರಡು ದ್ವಿಚಕ್ರವಾಹನ ವಶಪಡಿಸಿಕೊಂಡಿರುವ ಪೊಲೀಸರು, ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.