ವಾರಣಾಸಿಯ ಅಥವಾ ಕಾಶಿಯ ಶ್ರೀ ವಿಶ್ವೇಶ್ವರ ಲಿಂಗವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ಪ್ರಸಿದ್ಧ, ಪ್ರಾಚೀನ ಮತ್ತು ಶ್ರೀಮಂತವಾದುದು. ಹೇಗೆ ಇಲ್ಲಿಯ ಕಾಶೀವಿಶ್ವನಾಥ ಜ್ಯೋತಿರ್ಲಿಂಗ ಪ್ರಸಿದ್ಧವೋ ಹಾಗೇ ಕಾಶಿಯು ಭಾರತ ಸಂಸ್ಕೃತಿಯ ಪ್ರತೀಕವೂ ಆಗಿದೆ.
ಈ ನಗರದ ಪಕ್ಕದಲ್ಲಿ ಹರಿಯುವ ಗಂಗಾನದಿಯಲ್ಲಿ ಅನೇಕ ಸ್ನಾನ ಘಟ್ಟಗಳಿವೆ. ಅದರಲ್ಲಿ ಹರಿಶ್ಚಂದ್ರ ಘಾಟ್ ಪ್ರಸಿದ್ಧವಾದುದು. ಅದು ಪೌರಾಣಿಕ ಪ್ರಸಿದ್ಧಿಯನ್ನೂ ಹೊಂದಿದೆ. ಇದು ಮೃತದೇಹಗಳನ್ನು ಸುಡುವ ಘಟ್ಟ . ಹಿಂದೆ ಚಕ್ರವರ್ತಿಯಾಗಿದ್ದ ಸತ್ಯ ಹರಿಶ್ಚಂದ್ರನು ಇಲ್ಲಿ ಸ್ಮಶಾನದ ಕಾವಲು ಕಾದಿದ್ದನೆಂದು ಪುರಾಣ ಕತೆ ಹೇಳುತ್ತದೆ.
ದೇವಸ್ಥಾನದ ಸುತ್ತಲೂ ಆಂಜನೇಯ, ಗಣಪತಿ, ದುರ್ಗಾ, ಹಾಗೂ ನೂರಾರು ಶಿವಲಿಂಗಗಳಿವೆ. ಆವರಣದಲ್ಲಿ ಒಂದು ಪುರಾತನ ವಟವೃಕ್ಷವಿದೆ. ಮನಸ್ಸಿನಲ್ಲಿ ಬೇಕಾದ ಕೋರಿಕೆಯನ್ನು ಸಂಕಲ್ಪಸಿಕೊಂಡು ಅದಕ್ಕೆ ದಾರ ಕಟ್ಟಿದರೆ ಆಸೆ ಕೈಗೂಡುವುದೆಂದು ಹೇಳುತ್ತಾರೆ.
ಹಾಗಾಗಿ ಲಕ್ಷಾಂತರ ದಾರಗಳು ವೃಕ್ಷವನ್ನು ಸುತ್ತಿಕೊಂಡಿವೆ. ತಾಯಿ ವಿಶಾಲಾಕ್ಷಿಯ ದರ್ಶನ ಮತ್ತು ಅನ್ನಪೂರ್ಣೇಶ್ವರಿ ಹಾಗೂ ಕಾಳ ಭೈರವನ ದರ್ಶನ ಮಾಡಲೇಬೇಕು ಆಗಲೇ ವಿಶ್ವನಾಥನ ದರ್ಶನ ಪೂರ್ಣಗೊಂಡಂತೆ ಎಂಬ ನಂಬಿಕೆ ಇದೆ.