ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಶಿಕ್ಷಣವನ್ನು ಜಾರಿಗೊಳಿಸಿದ್ದಾರೆ. ಇದರ ಅನುಷ್ಟಾನದ ಪ್ರಗತಿ ತಿಳಿದುಕೊಳ್ಳುವ ಸಲುವಾಗಿ ಇತ್ತೀಚೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಈ ವೇಳೆ ಸ್ವತಃ ತೆಲುಗು ಮಾಧ್ಯಮದಲ್ಲಿ ಓದಿ ಇಂಗ್ಲಿಷ್ ಮಾತನಾಡದ್ದಕ್ಕೆ ಮೂದಲಿಕೆಗೊಳಗಾಗಿದ್ದ 42ರ ಹರೆಯದ ಶಿಕ್ಷಕ ಜಿ.ವಿ. ಪ್ರಸಾದ್ ಇದನ್ನು ಸವಾಲಾಗಿ ಸ್ವೀಕರಿಸಿ ತಮ್ಮ ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕೆಯನ್ನು ತರಬೇತುಗೊಳಿಸಿದ್ದು, ಇದರ ವಿಡಿಯೋ ದೇಶಾದ್ಯಂತ ಗಮನ ಸೆಳೆದಿದೆ.
ಆಂಧ್ರದ ಗೋದಾವರಿ ಜಿಲ್ಲೆಯ ತೊಂಡಂಗಿ ಮಂಡಲದಲ್ಲಿರುವ ಬೆಂಡಪುಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರ ಪಾಶ್ಚ್ಯಾತ್ಯ ಶೈಲಿಯ ಸ್ಫೋಕನ್ ಇಂಗ್ಲೀಷ್, ಅವರ ಆತ್ಮವಿಶ್ವಾಸ, ಮಾತನಾಡುವ ಶೈಲಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಸ್ವತಃ ಸಿಎಂ ಜಗನ್ ಮೋಹನ್ ರೆಡ್ಡಿ ವಿದ್ಯಾರ್ಥಿಗಳ ಕಾನ್ಫಿಡೆನ್ಸ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲೂ ಇಂಗ್ಲೀಷ್ ಮೀಡಿಯಂ ಜಾರಿಗೊಳಿಸುವ ಮೂಲಕ ಜಗನ್ಮೋಹನ್ ರೆಡ್ಡಿ ನೆರವಾಗಿದ್ದಕ್ಕೆ ವಿದ್ಯಾರ್ಥಿನಿಯರು ಧನ್ಯವಾದ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಇಂಗ್ಲಿಷ್ ಮಾತನಾಡುವ ಕೌಶಲ್ಯಕ್ಕಾಗಿ ತಮ್ಮ ಇಂಗ್ಲಿಷ್ ಶಿಕ್ಷಕ ಜಿ.ವಿ. ಪ್ರಸಾದ್ ಅವರನ್ನು ಗೌರವಿಸಿದ್ದಾರೆ. ಅವರು ಕಳೆದ ಕೆಲ ತಿಂಗಳಿಂದ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌ನಲ್ಲಿ ವಿಡಿಯೋ ನೋಡುವಂತೆ ಮಾಡಿ ವ್ಯಾಕರಣ ಮತ್ತು ಉಚ್ಚಾರಣೆಯನ್ನು ಸರಿಪಡಿಸುವ ಮೂಲಕ ತರಬೇತಿ ನೀಡುತ್ತಿದ್ದಾರೆ.