ಇಂದಿನ ದಿನಮಾನಗಳಲ್ಲಿ ಎಲ್ಲ ಕೆಲಸ ಕಾರ್ಯಗಳಿಗೂ ತಂತ್ರಜ್ಞಾನದ ಮಾಹಿತಿ ಅತ್ಯಗತವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಬಹಳಷ್ಟು ಸರ್ಕಾರಿ ನೌಕರರು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ 2021ರ ಅಂತ್ಯದವರೆಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಾಗಿ 2.55 ಲಕ್ಷ ನೌಕರರು ನೋಂದಣಿ ಮಾಡಿಕೊಂಡಿದ್ದು ಈ ಪೈಕಿ 2.46 ಲಕ್ಷ ನೌಕರರು ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಯಲ್ಲಿ 1.65 ಲಕ್ಷ ನೌಕರರು ಉತ್ತೀರ್ಣರಾಗಿದ್ದು, ಉಳಿದ 90 ಸಾವಿರಕ್ಕೂ ಅಧಿಕ ಮಂದಿ ಫೇಲ್ ಆಗಿದ್ದಾರೆ. ಅಲ್ಲದೆ ಇನ್ನೂ ಮೂರೂವರೆ ಲಕ್ಷಕ್ಕೂ ಅಧಿಕ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಿದೆ ಎಂದು ಹೇಳಲಾಗಿದೆ.
ಇದೀಗ ಡಿಸೆಂಬರ್ 31ರ ಒಳಗೆ ಉತ್ತೀರ್ಣರಾಗಲು ರಾಜ್ಯ ಸರ್ಕಾರ ಕೊನೆಯ ಅವಕಾಶ ನೀಡಿದ್ದು, ಒಂದು ವೇಳೆ ಉತ್ತೀರ್ಣರಾಗದಿದ್ದರೆ ಅಂತವರ ಮುಂಬಡ್ತಿ, ವಾರ್ಷಿಕ ವೇತನ ಬಡ್ತಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಸಿಗುವುದಿಲ್ಲ ಎಂದು ತಿಳಿಸಲಾಗಿದೆ. ಕೆಲ ಹುದ್ದೆಗಳನ್ನು ಹೊರತುಪಡಿಸಿ ಗ್ರೂಪ್ ಎ, ಬಿ, ಸಿ ಸೇವೆಯಲ್ಲಿರುವವರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯವಾಗಿದೆ.