ರಾಜ್ಯದ ಎಲ್ಲ ಸರ್ಕಾರಿ ಗೋಶಾಲೆಗಳ ಸಮೀಪ ಚೆಕ್ ಡ್ಯಾಮ್ ನಿರ್ಮಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಪಶುಸಂಗೋಪನಾ ಸಚಿವ ಪ್ರಭು ಬಿ. ಚೌಹಾಣ್ ಭಾನುವಾರದಂದು ಈ ವಿಷಯ ತಿಳಿಸಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಗೋ ಶಾಲೆಗಳ ಸಮೀಪ ಚೆಕ್ ಡ್ಯಾಂ ನಿರ್ಮಿಸುವುದರಿಂದ ಮಳೆ ನೀರು ಸಂಗ್ರಹಿಸಿದ ವೇಳೆ ಮೇವು ಬೆಳೆಯಲು ಸಹಕಾರಿಯಾಗಲಿದೆ. ಜೊತೆಗೆ ಅಂತರ್ಜಲ ಸಹ ವೃದ್ಧಿಯಾಗಲಿದ್ದು, ಮೇವು ಉತ್ಪಾದನೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲೆಯ ಬೆಳವಿ ಜಿಲ್ಲಾ ಸರ್ಕಾರಿ ಗೋಶಾಲೆ ಬಳಿ ಪ್ರಾಯೋಗಿಕವಾಗಿ ಚೆಕ್ ಡ್ಯಾಂ ನಿರ್ಮಿಸಲಾಗಿದ್ದು, ಅದು ಯಶಸ್ವಿಯಾಗಿದೆ ಎಂದು ತಿಳಿಸಿದ ಸಚಿವರು, ಹೀಗಾಗಿ ಇದನ್ನು ರಾಜ್ಯದಾದ್ಯಂತ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ನುಡಿದರು.