ಇಟಲಿ ವಿಶ್ವದ ಅತ್ಯಂತ ಸುಂದರವಾದ ದೇಶಗಳಲ್ಲೊಂದು. ಪ್ರವಾಸಿಗರನ್ನು ಕೈಬೀಸಿ ಕರೆಯೋ ಇಟಲಿಯಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡಲು ಹೊಸ ಯೋಜನೆ ಹಮ್ಮಿಕೊಳ್ಳಲಾಗಿದೆ. ಇಂಧನಗಳ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶ.
ಇಟಲಿಯಲ್ಲಿ ಏರ್ ಕಂಡಿಷನರ್ ಬಳಕೆ ಮೇಲೆ ನಿಯಂತ್ರಣ ಹೇರಲಾಗಿದೆ. ಬೇಸಿಗೆಯಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ಮನಬಂದಂತೆ ಎಸಿ ಬಳಸುವಂತಿಲ್ಲ. 25 °C ಗಿಂತ ಕಡಿಮೆ ತಾಪಮಾನದಲ್ಲಿ ಎಸಿ ಬಳಸದಂತೆ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಇಟಲಿಯ ರಕ್ಷಣಾ ಉಪ ಕಾರ್ಯದರ್ಶಿ ಜಾರ್ಜಿಯೊ ಮುಲೆ ಈ ಮಾಹಿತಿ ನೀಡಿದ್ದಾರೆ.
ಬೇಸಿಗೆಯಲ್ಲಿ ಉಷ್ಣತೆ 40 °C ಗಿಂತ ಹೆಚ್ಚಿರುವ ದೇಶಗಳಲ್ಲಿ ಏರ್ ಕಂಡಿಷನರ್ ಬಳಸುವುದು ಅನಿವಾರ್ಯ. ಆದ್ರೆ ಇಟಲಿಯಲ್ಲಿ ಉಷ್ಣಾಂಶ ಇಷ್ಟೊಂದು ಹೆಚ್ಚಾಗಿರುವುದಿಲ್ಲ. ಬೇಸಿಗೆಯಲ್ಲೂ ಆಹ್ಲಾದಕರ ವಾತಾವರಣ ಇರುತ್ತದೆ. ಹಾಗಾಗಿಯೇ ಇಟಲಿ ಸರ್ಕಾರ ‘ಆಪರೇಷನ್ ಥರ್ಮೋಸ್ಟಾಟ್’ಎಂಬ ಈ ಯೋಜನೆಯನ್ನು ಜಾರಿ ಮಾಡಿದೆ.
ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ. ಈ ನಿಯಮದ ಪ್ರಕಾರ ಹವಾಮಾನವು ತಂಪಾಗಿದ್ದಾಗ, ಸರ್ಕಾರಿ ಕಟ್ಟಡಗಳಲ್ಲಿ ಎಸಿಯನ್ನು 19 °C ಗಿಂತ ಹೆಚ್ಚು ಇಟ್ಟುಕೊಳ್ಳುವಂತಿಲ್ಲ. ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಅಂಚೆ ಕಚೇರಿಗಳೂ ಈ ನಿಯಮಕ್ಕೆ ಒಳಪಡುತ್ತವೆ. ಆದರೆ ಖಾಸಗಿ ಕಂಪನಿಗಳು, ಮನೆಗಳಲ್ಲಿ ಎಸಿ ಬಳಕೆ ಮೇಲೆ ಸರ್ಕಾರ ಯಾವುದೇ ನಿರ್ಬಂಧ ಹೇರಿಲ್ಲ. ಜನರೇ ಅರ್ಥಮಾಡಿಕೊಂಡು ಮಿತವಾಗಿ ಇಂಧನ ಬಳಸುತ್ತಾರೆ ಎಂದು ಇಟಲಿ ಸರ್ಕಾರ ಹೇಳಿದೆ. ಈ ಯೋಜನೆಯಿಂದ ವರ್ಷಕ್ಕೆ ಕನಿಷ್ಠ 2 ಬಿಲಿಯನ್ ಘನ ಮೀಟರ್ ಅನಿಲ ಉಳಿತಾಯವಾಗಲಿದೆಯಂತೆ.