ಭಾರತೀಯ ರೈಲ್ವೆ ಇಲಾಖೆ ಅತಿ ದೊಡ್ಡ ನೇಮಕಾತಿ ಅಭಿಯಾನವನ್ನೇ ಹಮ್ಮಿಕೊಂಡಿದೆ. ಮುಂದಿನ ಒಂದು ವರ್ಷದಲ್ಲಿ 1,48,463 ಜನರಿಗೆ ಸರ್ಕಾರಿ ಉದ್ಯೋಗ ನೀಡಲು ಮುಂದಾಗಿದೆ. ಕಳೆದ 8 ವರ್ಷಗಳಲ್ಲಿ ರೈಲ್ವೆ ಇಲಾಖೆ ಸರಾಸರಿ 43,678 ಜನರನ್ನು ಮಾತ್ರ ನೇಮಿಸಿಕೊಂಡಿತ್ತು.
ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಎಲ್ಲ ಇಲಾಖೆ, ಸಚಿವಾಲಯಗಳಲ್ಲಿ ಮಾನವ ಸಂಪನ್ಮೂಲದ ಸ್ಥಿತಿಗತಿ ಅವಲೋಕಿಸಿ ಮುಂದಿನ ಒಂದು ವರ್ಷದಲ್ಲಿ ಉದ್ಯೋಗ ಭರ್ತಿ ಮಾಡುವಂತೆ ಆದೇಶಿಸಿದ್ದಾರೆ. ಮಾಹಿತಿಯ ಪ್ರಕಾರ ಇಲಾಖೆಯಲ್ಲಿ ಶೇ.25.75 ರಷ್ಟು ಹುದ್ದೆಗಳು ಖಾಲಿ ಇವೆ.
ಮಾರ್ಚ್ 1, 2020ರಂತೆ ಒಟ್ಟು 31.91 ಲಕ್ಷ ಸರ್ಕಾರಿ ನೌಕರರು ಉದ್ಯೋಗದಲ್ಲಿದ್ದರೆ, ಮಂಜೂರಾದ ಹುದ್ದೆಗಳ ಸಂಖ್ಯೆ 40.78. ಲಕ್ಷ ಎಂದು ವೇತನ ಮತ್ತು ಭತ್ಯೆಯ ವಾರ್ಷಿಕ ವರದಿಯಲ್ಲಿ ವೆಚ್ಚ ಇಲಾಖೆ ಹೇಳಿದೆ. ಖಾಲಿ ಇರುವ ಹುದ್ದೆಗಳ ಪೈಕಿ ಶೇ.92ರಷ್ಟು ರೈಲ್ವೆ, ರಕ್ಷಣೆ, ಗೃಹ ಸಚಿವಾಲಯ, ಅಂಚೆ ಮತ್ತು ಕಂದಾಯ ಇಲಾಖೆಗಳಿಗೆ ಸೇರಿದೆ. ಪ್ರಸ್ತುತ ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ 31.33 ಲಕ್ಷ ಹುದ್ದೆಗಳಲ್ಲಿ ರೈಲ್ವೆಯ ಪಾಲು ಶೇ.40.55ರಷ್ಟಿದೆ.
2014 ರಿಂದ ಈವರೆಗೆ 3,49,422 ಜನರು ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. 2022-23ರಲ್ಲಿ 1,48,463 ಜನರಿಗೆ ಸರ್ಕಾರಿ ಉದ್ಯೋಗ ನೀಡಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ಕಳೆದ 6 ವರ್ಷಗಳಲ್ಲಿ ಪ್ರಸ್ತಾವಿತ 81,00 ಹುದ್ದೆಗಳ ಪೈಕಿ 72,000 ಹುದ್ದೆಗಳನ್ನು ರೈಲ್ವೆ ರದ್ದುಗೊಳಿಸಿದೆ. ಇವುಗಳಲ್ಲಿ ಹೆಚ್ಚಿನ ಹುದ್ದೆಗಳು ಸಿ ಮತ್ತು ಡಿ ವರ್ಗಕ್ಕೆ ಸೇರಿವೆ. ತಂತ್ರಜ್ಞಾನ ಮತ್ತು ಯಾಂತ್ರೀಕರಣದ ಕಾರಣಕ್ಕೆ ಈ ಹುದ್ದೆಗಳನ್ನು ರದ್ದು ಮಾಡಲಾಗಿದೆ.