ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕವನ್ನು 10 ಸಾವಿರ ರೂ.ಗಳಷ್ಟು ಏರಿಕೆ ಮಾಡಿ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ. ಇದರಿಂದಾಗಿ ಈ ಮೊದಲು 23,810 ರೂಪಾಯಿ ಪಾವತಿಸಬೇಕಿದ್ದ ವಿದ್ಯಾರ್ಥಿಗಳು ಈಗ 33,810 ರೂಪಾಯಿಗಳನ್ನು ಪಾವತಿಸಬೇಕಿದೆ.
ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶುಲ್ಕ ಹೆಚ್ಚಿಸಲು ಮನವಿ ಮಾಡಿದ್ದರೂ ಇದಕ್ಕೆ ನಿರಾಕರಿಸಿದ್ದ ರಾಜ್ಯ ಸರ್ಕಾರ, ಇದೀಗ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಜೊತೆಗೆ ಖಾಸಗಿ ಎಂಜಿನಿಯರಿಂಗ್ ಕಾಲೇಜು ಮತ್ತು ಡೀಮ್ಡ್ ವಿವಿಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೂ ತನ್ನ ಹೊಸ ಶುಲ್ಕ ನೀತಿಯನ್ನು ಅನ್ವಯಿಸಿದೆ.
ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದ ಬಹುತೇಕ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಿಗೆ ದಾಖಲಾಗುತ್ತಿದ್ದು, ಇದೀಗ ಶುಲ್ಕ ಏರಿಕೆಯಿಂದ ಅವರುಗಳ ಮೇಲೆ ಗದಾಪ್ರಹಾರ ಮಾಡಿದಂತಾಗಿದೆ. ಕೋವಿಡ್ ಲಾಕ್ ಡೌನ್ ನಿಂದ ಈಗಾಗಲೇ ಆರ್ಥಿಕವಾಗಿ ತತ್ತರಿಸಿರುವ ಪೋಷಕರಿಗೆ ಈ ಶುಲ್ಕ ಏರಿಕೆ ಮತ್ತೊಂದು ಹೊರೆಯಾಗಿ ಪರಿಣಮಿಸಿದೆ.