ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿ ಹೊಂದಬೇಕು ಎಂದು ರಾಜ್ಯ ಸರ್ಕಾರಗಳು ಎಷ್ಟೇ ಅನುದಾನ ನೀಡಿದರೂ ಸಹ ಒಂದಿಲ್ಲೊಂದು ಯಡವಟ್ಟುಗಳು ಸಂಭವಿಸುತ್ತಲೇ ಇರುತ್ತದೆ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ತಮಿಳುನಾಡಿನ ವಿರುದುನಗರದಲ್ಲಿ ಸರ್ಕಾರಿ ಆಸ್ಪತ್ರೆಯ ಬೆಡ್ ಕುಸಿದು ಐದು ದಿನದ ಮಗುವಿನ ತಲೆಗೆ ಗಂಭೀರ ಗಾಯವಾಗಿದೆ.
ಸ್ಕ್ಯಾನಿಂಗ್ ವರದಿಯಲ್ಲಿ ಮಗುವಿನ ತಲೆಗೆ ಗಂಭೀರ ಏಟಾಗಿರುವುದು ಗಮನಕ್ಕೆ ಬಂದ ಬಳಿಕ ಮಗುವನ್ನು ಮಧುರೈನ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು ಐಸಿಯುವಿನಲ್ಲಿ ಇರಿಸಲಾಗಿದೆ.
ಮಗುವಿನ ತಾಯಿ ಇದೇ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಬುಧವಾರದಂದು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕವೂ ಅವರನ್ನು ಹೆಚ್ಚಿನ ಚಿಕತ್ಸೆಗೆಂದು ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಆದರೆ ನಿನ್ನೆ ರಾತ್ರಿ ಮಂಚ ಮುರಿದು ಹೋದ ಪರಿಣಾಮ ತಾಯಿ ಹಾಗೂ ಮಗು ನೆಲಕ್ಕೆ ಬಿದ್ದಿದ್ದಾರೆ. ಈ ಅವಘಡದಲ್ಲಿ ಮಗುವಿನ ತಲೆಗೆ ಗಂಭೀರ ಏಟಾಗಿದೆ.
ಈ ಘಟನೆ ಬಳಿಕ ಆಕ್ರೋಶಗೊಂಡ ಪೋಷಕರು ಆಸ್ಪತ್ರೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಬೆಡ್ಗಳ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೇ ಮಧುರೈ ಆಸ್ಪತ್ರೆಗೆ ಮಗುವನ್ನು ದಾಖಲಿಸುವ ವೇಳೆಯಲ್ಲಿಯೂ ಆ್ಯಂಬುಲೆನ್ಸ್ಗೆ ಕರೆ ಮಾಡಲು ಆಸ್ಪತ್ರೆ ಸಿಬ್ಬಂದಿ ವಿಳಂಬ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.