ಹಾಸನ: ರಾಜ್ಯ ಬಿಜೆಪಿ ಸರ್ಕಾರ ಶಿಕ್ಷಣ ಇಲಾಖೆಯಲ್ಲಿಯೂ ರಾಜಕೀಯ ಮಾಡುತ್ತಿದೆ. ಸರ್ಕಾರದ ತಾರತಮ್ಯ ನೀತಿ ವಿರುದ್ಧ ಸಿಎಂ ಬಸವರಾಜ್ ಬೊಮ್ಮಾಯಿ ಮನೆ ಮುಂದೆ ಧರಣಿ ಮಾಡುತ್ತೇನೆ ಎಂದು ಜೆಡಿಎಸ್ ಮುಖಂಡ, ಶಾಸಕ ಹೆಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ರೇವಣ್ಣ, ಹೊಳೆನರಸಿಪುರ ಮಹಿಳಾ ಕಾಲೇಜಿಗೆ ಎಂಎಸ್ ಸಿ ಪದವಿ ಮಂಜೂರು ಮಾಡಲು ರಾಜ್ಯ ಸರ್ಕಾರ ಮಿನಾಮೇಷ ಎಣಿಸುತ್ತಿದೆ. ಶಿಕ್ಷಣ ಇಲಾಖೆ ಕಾರ್ಯದರ್ಶಿ ಒಪ್ಪಿಗೆ ನೀಡಿದ್ದಾರೆ. ಮೈಸೂರು ವಿವಿಯವರು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕಾಲೇಜಿನಲ್ಲಿ ಕೋರ್ಸ್ ಆರಂಭಿಸಲು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಮಾತ್ರ ನಿರಾಕರಿಸುತ್ತಿದ್ದಾರೆ. ಸರ್ಕಾರದ ಈ ಧೋರಣೆ ಖಂಡಿಸಿ ಸಿಎಂ ಮನೆ ಮುಂದೆ ಮಂಗಳವಾರದಿಂದ ಧರಣಿ ನಡೆಸುತ್ತೇನೆ ಎಂದು ಗುಡುಗಿದ್ದಾರೆ.
ನನ್ನ ಪ್ರಾಣ ಹೋದರೆ ಹೋಗಲಿ, ಅರೆಸ್ಟ್ ಮಾಡುವುದಾದರೆ ಮಾಡಲಿ. ಆದರೆ ಇಂತಹ ಕೀಳುಮಟ್ಟದ ರಾಜಕೀಯವನ್ನು ಮಾತ್ರ ಸಹಿಸಲ್ಲ. ನಮ್ಮ ಮಕ್ಕಳಿಗಾಗಿ ಕೇಳುತ್ತಿಲ್ಲ. ಕಾಲೇಜಿನಲ್ಲಿ ಬಡವರ ಹೆಣ್ಣುಮಕ್ಕಳು ಓದುತ್ತಿದ್ದಾರೆ. ಶಿಕ್ಷಣ ವಿಚಾರದಲ್ಲೂ ಜಿಲ್ಲೆಗೆ ಅನ್ಯಾಯವಾದರೆ ಸುಮ್ಮನಿರಬೇಕೆ? ರಾಜ್ಯ ಲೂಟಿಕೋರರ ಕೈಸೇರಿದೆ. ಇವರನ್ನು ಶಿಕ್ಷಣ ಸಚಿವರು ಎನ್ನಲು ನಾಚಿಕೆಯಾಗುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.