ಕತ್ತೆ ಕದ್ದ ಆರೋಪದ ಅಡಿಯಲ್ಲಿ ಕಾಂಗ್ರೆಸ್ ಮುಖಂಡನನ್ನು ಬಂಧಿಸಿದ ಘಟನೆಯು ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ. ಇತ್ತೀಚಿಗೆ ಕೆಸಿಆರ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಳಕೆ ಮಾಡಿದ್ದ ಕತ್ತೆ ಕದ್ದಿದ್ದು ಎಂದು ಆರೋಪಿಸಲಾಗಿದೆ.
ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಜನ್ಮದಿನದಂದು ಕತ್ತೆಯೊಂದಿಗೆ ಪ್ರತಿಭಟನೆ ಮಾಡಿದ್ದ ಎನ್ಎಸ್ಐಯುನ ಅಧ್ಯಕ್ಷ ವೆಂಕಟ್ ಬಲ್ಮೂರ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಮ್ಮುಕುಂಟಾ ನಿವಾಸಿಯಾದ ತಂಗುಟೂರಿ ರಾಜ್ಕುಮಾರ್, ತನ್ನ ಕತ್ತೆಯನ್ನು ಕದ್ದಿದ್ದಾರೆ ಎಂದು ಆರೋಪಿಸಿ ಏಳು ಮಂದಿಯ ವಿರುದ್ಧ ದೂರನ್ನು ದಾಖಲಿಸಿದ್ದರು.
ಜಮ್ಮುಕುಂಟ ಪೊಲೀಸ್ ಠಾಣೆಯಲ್ಲಿ ವೆಂಕಟ್ ಬಲ್ಮೂರ್ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಆರು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಕಾನೂನುಬಾಹಿರ ಸಭೆ, ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ, ಕಳ್ಳತನ ಮತ್ತು ಪ್ರಾಣಿಗಳ ಮೇಲೆ ಕ್ರೌರ್ಯ ತೋರಿದ ಆರೋಪದಡಿ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 143, 153, 504, 379 ರ ಅಡಿಯಲ್ಲಿ 149, ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ರ ಸೆಕ್ಷನ್ 11 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.