ಬೆಂಗಳೂರು: ಸರ್ಕಾರದ ಭರವಸೆ ತಿರಸ್ಕರಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಜನವರಿ 1ರಂದು ಅತಿಥಿ ಶಿಕ್ಷಕರು ಕಾಲೇಜುಗಳಿಗೆ ಹಾಜರಾಗದಿದ್ದರೆ ಪರ್ಯಾಯ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿರುವ ಕಾಲೇಜು ಶಿಕ್ಷಣ ಇಲಾಖೆಯ ಕ್ರಮಕ್ಕೆ ಅತಿಥಿ ಉಪನ್ಯಾಸಕರು ಸೆಡ್ಡು ಹೊಡೆದಿದ್ದು, ಸೇವೆ ಕಾಯಂಮಾತಿಗೆ ಒತ್ತಾಯಿಸಿ ಜನವರಿ 1ರಿಂದ ಬೆಂಗಳೂರಿನಿಂದ ತುಮಕೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.
ಸೇವಾ ಭದ್ರತೆಗೆ ಒತ್ತಾಯಿಸಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಜನವರಿ 1ರಂದು ಸಿದ್ದಗಂಗಾ ಮಠದ ಆವರಣದಲ್ಲಿ ಸಿದ್ದಗಂಗಾ ಶ್ರೀಗಳು ಪಾದಯಾತ್ರೆಗೆ ಚಾಲನೆ ನೀಡಲಿದ್ದು, ಪ್ರತಿದಿನ 20 ಕಿಮೀ ಸಾಗಿದ ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಈ ಕುರಿತಾಗಿ ಮಾತನಾಡಿದ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಕಲ್ಮನಿ, ಉನ್ನತ ಶಿಕ್ಷಕರ ಸಚಿವರು ನೀಡಿದ ಭರವಸೆಗಳು ಅತಿಥಿ ಉಪನ್ಯಾಸಕರ ಮೂಗಿಗೆ ತುಪ್ಪ ಸವರಿದಂತಿದೆ. ಸೇವಾ ಭದ್ರತೆ ಇಲ್ಲದ ಭರವಸೆಗಳಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ವಿಧಾನಸಭೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವಂತೆ ಆಗಿನ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಈಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದು, ಕಾಯಂ ಮಾಡಲು ಮೀನಾ ಮೇಷ ಏಕೆ ಎಂದು ಪ್ರಶ್ನಿಸಿದ್ದಾರೆ.