ಬೆಂಗಳೂರು: ರಾಜ್ಯದಲ್ಲಿನ ಧರ್ಮ ಸಂಘರ್ಷ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಹಲವು ವರ್ಷಗಳಿಂದ ನಾವು ಸಾಮರಸ್ಯದಿಂದ ಬಾಳುತ್ತಿದ್ದೇವೆ. ಆದರೆ ಇತ್ತೀಚೆಗೆ ಪ್ರತಿನಿತ್ಯ ದಿನಕ್ಕೊಂದು ವಿಚಾರಗಳು ನಡೆಯುತ್ತಿರುವುದು ನೋಡಿದರೆ ಸರ್ಕಾರದ ಜಾಣಮೌನವೇ ಎಲ್ಲದಕ್ಕೂ ಪ್ರೋತ್ಸಾಹ ನೀಡಿದಂತಿದೆ ಎಂದು ಕಿಡಿಕಾರಿದ್ದಾರೆ.
ಇದೀಗ ರಾಜ್ಯದಲ್ಲಿ ಹೊಸ ಅಭಿಯಾನ ಆರಂಭವಾಗುತ್ತಿದೆ. ಮುಸ್ಲಿಂ ವಾಹನ ನಿರ್ಬಂಧ ಎಂದು ಈ ರೀತಿ ಸಮಾಜದ ಸ್ವಾಸ್ಥ್ಯ ಕದಡುವ ವಾತಾವರಣ ಸೃಷ್ಟಿಸುತ್ತಿರುವವರನ್ನು ಮೊದಲು ಬಂಧಿಸಬೇಕು. ಇಲ್ಲವಾದಲ್ಲಿ ಸರ್ಕಾರ ಇದೆಯೇ ಎಂಬುದು ಅನುಮಾನ ಬರುತ್ತದೆ ಎಂದು ಹೇಳಿದ್ದಾರೆ.
ಕಣ್ಣಂಚನ್ನು ತೇವಗೊಳಿಸುತ್ತೆ ಹೃದಯಸ್ಪರ್ಶಿ ಕ್ಷಣಗಳ ಈ ವಿಡಿಯೋ
ಮುಸ್ಲಿಂರು ಕೆತ್ತಿದ ವಿಗ್ರಹಗಳನ್ನು ಪೂಜಿಸುವಂತಿಲ್ಲ ಎಂದು ಅರ್ಚಕರೊಬ್ಬರು ಹೇಳಿಕೆ ನೀಡಿದ್ದಾರೆ. ಈಗಾಗಲೇ ಅದೆಷ್ಟೋ ವಿಗ್ರಹಗಳು ಕೆತ್ತನೆಯಾಗಿವೆ. ಆ ವಿಗ್ರಹಗಳನ್ನು ಏನು ಮಾಡಬೇಕು ? ಇಂತಹ ವಾತಾವರಣ ಮುಂದುವರೆದರೆ ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕೆಂದುಕೊಂಡಿದ್ದೀರಿ ? ಧರ್ಮ ಸಂಘರ್ಷದ ವಾತಾವರಣದಿಂದ ರಾಜ್ಯಕ್ಕೆ ಸಮಸ್ಯೆ ಎದುರಾಗುತ್ತದೆ ಹೊರತು ಬೇರೇನೂ ಇಲ್ಲ, ಹೂಡಿಕೆದಾರರು ಬಂದರೆ ರಾಜ್ಯದಲ್ಲಿ ಶಾಂತಿಯಿದೆಯೇ ? ನಿಮ್ಮ ಸರ್ಕಾರದ ಕೊಡುಗೆಯಾದರೂ ಏನು ? ಕೇವಲ ವೋಟ್ ಬ್ಯಾಂಕ್ ಗಾಗಿ ಈ ರೀತಿ ವಿಷಬೀಜ ಬಿತ್ತಿದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ರಾಜ್ಯ ಸರ್ಕಾರ ಒಂದು ತಿಂಗಳಲ್ಲಿ ಈಗಿರುವ ಸಮಸ್ಯೆ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ವಜನಾಂಗದ ಶಾಂತಿಯ ತೋಟವನ್ನು ಹಾಳುಮಾಡಿದ್ದೀರಾ. ನಾನು ಹಿಂದೂ ಸಂಸ್ಕೃತಿಯನ್ನು ಗೌರವಿಸುತ್ತೇನೆ. ಆದರೆ ಇಂತಹ ವಿವಾದಗಳನ್ನು ಸೃಷ್ಟಿಸಿ ಶಾಂತಿ ಕದಡುತ್ತಿದ್ದರೆ ನೋಡಿಕೊಂಡು ಸುಮ್ಮನಿರಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.