ಕೇಂದ್ರ ಗೃಹ ಸಚಿವ ಅಮಿತ್ ಷಾ ಗುರುವಾರದಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಅಭಿವೃದ್ಧಿ ಹೊಂದಿದ ಭಾರತ’ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸುತ್ತಿದ್ದು, ಇತ್ತೀಚೆಗೆ ಕರಾವಳಿಯಲ್ಲಿ ನಡೆದ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಗೃಹ ಸಚಿವರ ಈ ಭೇಟಿ ಕುತೂಹಲ ಕೆರಳಿಸಿದೆ.
ಅಮಿತ್ ಶಾ ಅವರು ಕಾರ್ಯಕ್ರಮದ ಹಿಂದಿನ ದಿನವೇ ಅಂದರೆ ಬುಧವಾರದಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ನಾಯಕರುಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ದಕ್ಷಿಣ ಕನ್ನಡದಲ್ಲಿ ಕೇವಲ 10 ದಿನಗಳ ಅಂತರದಲ್ಲಿ ಮೂರು ಹತ್ಯೆಗಳು ನಡೆದಿದ್ದು, ಅದರಲ್ಲೂ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ, ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ.
ಹೀಗಾಗಿ ಸ್ವತಃ ಶಾಸಕರುಗಳೂ ಸ್ವಪಕ್ಷೀಯ ಸರ್ಕಾರವನ್ನೇ ಟೀಕಿಸುತ್ತಿದ್ದಾರೆ. ಜೊತೆಗೆ ಹಿಂದೂ ಸಂಘಟನೆಗಳ ಮುಂಚೂಣಿ ನಾಯಕರು ಸಹ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದು, ಹೀಗಾಗಿ ಅಮಿತ್ ಶಾ ಅವರ ರಾಜ್ಯ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.