ತಿರುವನಂತಪುರಂ: ಪತ್ನಿಯ ಇಚ್ಛೆಗೆ ವಿರುದ್ಧವಾದ ಲೈಂಗಿಕ ಕ್ರಿಯೆ ಅತ್ಯಾಚಾರವೆಂದು ಕೇರಳ ಹೈಕೋರ್ಟ್ ಹೇಳಿದ್ದು, ಪತ್ನಿಯ ದೈಹಿಕ, ಮಾನಸಿಕ ಸ್ಥಿತಿಗೆ ಗೌರವ ನೀಡಬೇಕು ಎಂದು ತಿಳಿಸಿದೆ.
ಅಲ್ಲದೆ, ಪತ್ನಿ ಇಚ್ಛೆಗೆ ವಿರುದ್ಧವಾಗಿ ಪತಿ ಲೈಂಗಿಕ ಕ್ರಿಯೆ ನಡೆಸಿದರೆ ಅತ್ಯಾಚಾರವೆಂದು ಹೇಳಲಾಗುತ್ತದೆ. ಈ ಕಾರಣದಿಂದ ಡೈವೋರ್ಸ್ ಪಡೆಯಲು ಮಹಿಳೆ ಅರ್ಜಿ ಸಲ್ಲಿಸಬಹುದು ಎಂದು ಕೋರ್ಟ್ ತಿಳಿಸಿದೆ.
ಪತಿ ಲೈಂಗಿಕ ತೃಪ್ತಿಗಾಗಿ ಮತ್ತು ಹಣಕ್ಕಾಗಿ ಪೀಡಿಸಿದ್ದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ. ವೈದ್ಯನಾಗಿರುವ ಪತಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದು, ತವರುಮನೆಯವರು 77 ಲಕ್ಷ ರೂಪಾಯಿ ನಗದು ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನೀಡಿದ್ದಾರೆ ಎಂದು ಮಹಿಳೆ ವಿಚ್ಛೇದನ ಅರ್ಜಿಯಲ್ಲಿ ತಿಳಿಸಿದ್ದಾರೆ.
ಗಂಡನ ಲೈಂಗಿಕ ಕಿರುಕುಳ ಮತ್ತು ಹಿಂಸೆ ಬಗ್ಗೆ ಮಹಿಳೆ ತಿಳಿಸಿ ವಿಚ್ಛೇದನ ಕೋರಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆದು, ಪತ್ನಿಯ ಇಚ್ಛೆಗೆ ವಿರುದ್ಧದ ಲೈಂಗಿಕ ಕ್ರಿಯೆಯೂ ಅತ್ಯಾಚಾರ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಕಾರಣದಿಂದ ಮಹಿಳೆಯ ಡೈವೋರ್ಸ್ ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.