ಸ್ಪೇನ್‌ನ ವೆಲೆನ್ಸಿಯಾದಲ್ಲಿ ಸಮುದ್ರ ಪಾಲಾಗುತ್ತಿದ್ದ 14 ವರ್ಷದ ಬಾಲಕನನ್ನು ಡ್ರೋನ್ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಡ್ರೋನ್ ಜೀವರಕ್ಷಕ ಸೇವೆ ಬಾಲಕನ ಪ್ರಾಣ ಕಾಪಾಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. ಬಾಲಕ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ಹೇಗಾದರೂ ಈಜಿಕೊಂಡು ಹೊರಬರಲು ಪ್ರಯತ್ನಿಸುತ್ತಿದ್ದ.
ಕೂಡಲೇ ಸ್ಥಳಕ್ಕೆ ಬಂದ ರಕ್ಷಣಾ ಪಡೆ ಡ್ರೋನ್‌ನಿಂದ ಲೈಫ್ ವೆಸ್ಟ್ ಅನ್ನು ಸಮುದ್ರಕ್ಕೆ ಇಳಿಸಿದೆ. ಬಾಲಕ ಪ್ರಯಾಸಪಟ್ಟು ಲೈಫ್ ವೆಸ್ಟ್ ಅನ್ನು ಹಿಡಿದುಕೊಂಡಿದ್ದಾನೆ. ನಂತರ ಆತನ ರಕ್ಷಣೆಗಾಗಿ ಬೇವಾಚ್ ಬೋಟ್ ಅನ್ನು ಸ್ಥಳಕ್ಕೆ ಕರೆಸಲಾಯ್ತು.
ಸಮುದ್ರದ ಹೊಡೆತಕ್ಕೆ ಮಗು ಸಾಕಷ್ಟು ನಲುಗಿದ್ದ. ನೀರಿನಲ್ಲಿ ತೇಲಲು ಸಹ ಆತನಿಗೆ ಶಕ್ತಿ ಇರಲಿಲ್ಲ ಅಂತಾ ಡ್ರೋನ್ ಪೈಲಟ್ ಮಾಹಿತಿ ನೀಡಿದ್ದಾರೆ. ಭಾರೀ ಅಲೆಗಳಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸಹ ಸವಾಲಾಗಿ ಪರಿಣಮಿಸಿತ್ತು. ಜೆಟ್ ಸ್ಕೀ ಮೂಲಕ ಜೀವರಕ್ಷಕರು ಸ್ಥಳಕ್ಕೆ ಬರುವವರೆಗೂ ಬಾಲಕ ಲೈಫ್ ವೆಸ್ಟ್ ಸಹಾಯದಿಂದ ನೀರಿನಲ್ಲಿ ತೇಲುತ್ತಿದ್ದ.
ಬಾಲಕನನ್ನು ನೀರಿನಿಂದ ಹೊರಕ್ಕೆ ತಂದ ಬಳಿಕ ಆಮ್ಲಜನಕವನ್ನು ಪೂರೈಸಲಾಯ್ತು. ನಂತರ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಜೀವರಕ್ಷಕರು ಸ್ಥಳಕ್ಕೆ ತಲುಪುವ ಮೊದಲೇ ಡ್ರೋನ್ ನೆರವಿನಿಂದ ರಕ್ಷಣೆ ಮಾಡಿರೋದು ವಿಶೇಷ.