ರಾಜ್ಯದಲ್ಲಿ ಸಮವಸ್ತ್ರದ ವಿವಾದವು ತಾರಕಕ್ಕೇರಿರುವ ಬೆನ್ನಲ್ಲೇ ಅರುಣಾಚಲ ಪ್ರದೇಶದ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ.
2022-23ನೇ ಸಾಲಿನ ಶೈಕ್ಷಣಿಕ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಶಾಲೆಗೆ ತೆರಳಬಹುದಾಗಿದೆ.
ಪ್ರತಿ ಸೋಮವಾರದಂದು ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಉಡುಗೆಯನ್ನು ಧರಿಸಲು ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ.
180ಕ್ಕೂ ಹೆಚ್ಚು ಶಾಲೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಅರುಣಾಚಲ ಪ್ರದೇಶದ ಖಾಸಗಿ ಶಾಲೆಗಳು ಮತ್ತು ಮಕ್ಕಳ ಕಲ್ಯಾಣ ಸಂಘವು ಈ ನಿರ್ಧಾರವನ್ನು ಕೈಗೊಂಡಿದೆ.
“ಅರುಣಾಚಲದಲ್ಲಿ 100 ಕ್ಕೂ ಹೆಚ್ಚು ಬುಡಕಟ್ಟುಗಳು ಮತ್ತು ಉಪ ಬುಡಕಟ್ಟು ಜನಾಂಗಗಳಿವೆ. ಆದಿವಾಸಿಗಳಲ್ಲದವರು ಸೇರಿದಂತೆ ವಿದ್ಯಾರ್ಥಿಗಳು ಪ್ರತಿ ಸೋಮವಾರ ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಶಾಲೆಗೆ ಹೋಗಬೇಕೆಂದು ನಾವು ನಿರ್ಧರಿಸಿದ್ದೇವೆ. ಇದು ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುತ್ತದೆ ಎಂದು ಸಂಘದ ಉಪಾಧ್ಯಕ್ಷ ತಾರ್ ಜೋನಿ ಶುಕ್ರವಾರ ತಿಳಿಸಿದರು.
“ವಿದ್ಯಾರ್ಥಿಗಳು ಸಮುದಾಯವನ್ನು ಲೆಕ್ಕಿಸದೆ ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ಧರಿಸಲು ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಯಾರಾದರೂ ನಿಶಿ ಜನಾಂಗಕ್ಕೆ ಸೇರಿದ್ದರೆ, ಅವರು ನೈಶಿ ಉಡುಗೆಯನ್ನು ಧರಿಸುತ್ತಾರೆ. ಗ್ಯಾಲೋಸ್ ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ಧರಿಸುತ್ತಾರೆ. ಅದೇ ರೀತಿ ಬುಡಕಟ್ಟು ಜನಾಂಗದವರಲ್ಲದವರು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ ಎಂದು ಜೋನಿ ವಿವರಿಸಿದರು.