ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಸರ್ವರ್ ಡೌನ್ ಆಗಿದ್ದು, ಇದರ ಪರಿಣಾಮ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಲೆದು ಅಲೆದು ಹೈರಾಣಾಗಿ ಹೋಗಿದ್ದಾರೆ.
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಈ ಮೊದಲು ಸಹ ಆಗಾಗ ಸರ್ವರ್ ಸಮಸ್ಯೆ ಎದುರಾಗುತ್ತಿತ್ತಾದರೂ ಸ್ವಲ್ಪ ಸಮಯದ ಬಳಿಕ ಸರಿಯಾಗುತ್ತಿತ್ತು. ಆದರೆ ಈ ಬಾರಿ ಕಳೆದ ಒಂದು ವಾರದಿಂದಲೂ ಈ ಸಮಸ್ಯೆ ತಲೆದೋರಿದ್ದು, ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದೆ ಎನ್ನಲಾಗಿದೆ.
ಆಷಾಢಕ್ಕೂ ಮುನ್ನ ಆಸ್ತಿ ಖರೀದಿ ಮಾಡಿ ರಿಜಿಸ್ಟ್ರಾರ್ ಮಾಡಿಸಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿದ್ದವರು ಇದರಿಂದ ಬೇಸರಗೊಂಡಿದ್ದಾರೆ. ಜೊತೆಗೆ ಮಾರಾಟಗಾರರು ಅಥವಾ ಸಾಲ ಪಡೆಯುವವರು ಇಸಿ ಮತ್ತು ದೃಢೀಕರಣ ಪ್ರಮಾಣ ಪತ್ರ ಸಕಾಲಕ್ಕೆ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.