ಈ ಚುಮುಚುಮು ಚಳಿಗೆ ಸಂಜೆ ಹೊತ್ತಿಗೆ ಬಜ್ಜಿ, ಬೋಂಡಾ, ಅಂಬೋಡೆ ಏನಾದರೂ ಕುರಕಲು ತಿಂಡಿ ಸವಿಯಲು ಮನಸ್ಸಾಗುತ್ತದೆ.
ಹೊರಗಡೆ ಹೋಗಿ ತಿನ್ನುವ ಬದಲು ಮನೆಯಲ್ಲೇ ರುಚಿ ರುಚಿಯಾಗಿ ಸಬ್ಬಸ್ಸಿಗೆ ಸೊಪ್ಪಿನ ಅಂಬೊಡೆ ಮಾಡಿ ಸವಿದರೆ ಆರೋಗ್ಯ ಹದಗೆಡುವುದಿಲ್ಲ. ಇಲ್ಲಿದೆ ನೋಡಿ ಸಬ್ಬಸ್ಸಿಗೆ ಸೊಪ್ಪಿನ ಅಂಬೊಡೆ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಸಬ್ಬಸ್ಸಿಗೆ ಸೊಪ್ಪು – 1 ಕಟ್ಟು
ಕಡಲೆಬೇಳೆ – 3/4 ಕಪ್
ಪೇಪರ್ ಅವಲಕ್ಕಿ – 3/4 ಕಪ್
ತೆಂಗಿನಕಾಯಿ ತುರಿ – 1/2 ಕಪ್
ಕೊತ್ತಂಬರಿ ಬೀಜ – 3 ಚಮಚ
ಜೀರಿಗೆ – 1 ಚಮಚ
ಹಸಿ ಮೆಣಸು – 6
ಇಂಗು ಚಿಟಿಕೆಯಷ್ಟು
ಶುಂಠಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ನಿಂಬೆರಸ ಸ್ವಲ್ಪ
ಎಣ್ಣೆ ಕರಿಯಲು
ಮಾಡುವ ವಿಧಾನ
ಸಬ್ಬಸಿಗೆ ಸೊಪ್ಪನ್ನು ಸ್ವಚ್ಛಗೊಳಿಸಿ ಹೆಚ್ಚಿಟ್ಟುಕೊಳ್ಳಬೇಕು. ಕಡಲೇಬೇಳೆಯನ್ನು ಒಂದೆರಡು ಗಂಟೆ ನೀರಿನಲ್ಲಿ ನೆನೆಸಿ ನಂತರ ತರಿತರಿಯಾಗಿ ನೀರು ಹಾಕದೆ ರುಬ್ಬಿಕೊಳ್ಳಬೇಕು. ಅವಲಕ್ಕಿಯನ್ನು ನೀರು ಹಾಕದೆ ಪುಡಿ ಮಾಡಿಕೊಳ್ಳಬೇಕು.
ನಂತರ ಎಲ್ಲವನ್ನು ಸೇರಿಸಿ ಜೊತೆಗೆ ತೆಂಗಿನಕಾಯಿ ತುರಿ, ಕೊತ್ತಂಬರಿ ಬೀಜ, ಜೀರಿಗೆ, ಹಸಿ ಮೆಣಸು, ಇಂಗು, ಶುಂಠಿಯನ್ನು ನುಣ್ಣಗೆ ರುಬ್ಬಿಕೊಂಡು ಉಪ್ಪು ಹುಳಿ ಬೆರೆಸಿ ಚೆನ್ನಾಗಿ ಕಲಸಿಕೊಂಡು ಕಾದ ಎಣ್ಣೆಯಲ್ಲಿ ಅಂಬೊಡೆ ತಟ್ಟಿ ಹೊಂಬಣ್ಣ ಬರುವವರೆಗೆ ಕರಿಯಬೇಕು. ಅಂಬೊಡೆಯನ್ನು ಕಾಯಿ ಚಟ್ನಿಯೊಂದಿಗೆ ಸವಿದರೆ ರುಚಿಯಾಗಿರುತ್ತದೆ.