ಅದೇ ಇಡ್ಲಿ ಮತ್ತು ದೋಸೆ ತಿಂದು ಬೇಜಾರು ಆಗಿದ್ದರೆ, ಈ ಗುಳಿಯಪ್ಪ ಅಥವಾ ಪಡ್ಡುಗಳನ್ನು ಮಾಡಿ ಸವಿಯಿರಿ. ಸಾದಾ ಪಡ್ಡುಗಳಿಗಿಂತ ಆರೋಗ್ಯಕರ ಸಬ್ಬಸ್ಸಿಗೆ ಸೊಪ್ಪಿನ ಗುಳಿಯಪ್ಪ ರುಚಿ ಅದ್ಭುತವಾಗಿರುತ್ತದೆ. ಇಲ್ಲಿದೆ ಅದರ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ದಪ್ಪ ಅಕ್ಕಿ – 2 ಬಟ್ಟಲು
ಉದ್ದಿನಬೇಳೆ – 1/2 ಬಟ್ಟಲು
ಸಬ್ಬಸ್ಸಿಗೆ ಸೊಪ್ಪು – 1 ಬಟ್ಟಲು
ಅವಲಕ್ಕಿ – 1/2 ಬಟ್ಟಲು
ಮೆಂತೆ – 1 ಚಮಚ
ಈರುಳ್ಳಿ – 1
ಉಪ್ಪು ರುಚಿಗೆ ತಕ್ಕಷ್ಟು
ಹಸಿಮೆಣಸಿನಕಾಯಿ 1-2
ಕೊತ್ತಂಬರಿ ಸೊಪ್ಪು ಸ್ವಲ್ಪ
ಒಗ್ಗರಣೆಗೆ ಉದ್ದಿನಬೇಳೆ, ಕಡಲೆಬೇಳೆ, ಸಾಸಿವೆ, ಸ್ವಲ್ಪ ಕೊಬ್ಬರಿ ಎಣ್ಣೆ ಮತ್ತು ಹಸಿಮೆಣಸಿನಕಾಯಿ.
ಮಾಡುವ ವಿಧಾನ
ದಪ್ಪ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು 3 ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಬೇಕು. ನಂತರ 3 ಗಂಟೆ ಕಾಲ ನೆನೆದ ಮೆಂತೆ ಮತ್ತು ಅವಲಕ್ಕಿಯನ್ನು ಪ್ರತ್ಯೇಕವಾಗಿ ರುಬ್ಬಬೇಕು.
ಉದ್ದಿನಬೇಳೆಯನ್ನು ಕೂಡ ಬೇರೆಯಾಗಿ ರುಬ್ಬಬೇಕು. ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿಕೊಂಡು ಎಲ್ಲ ಹಿಟ್ಟನ್ನು ಮಿಶ್ರಣ ಮಾಡಿಕೊಳ್ಳಬೇಕು.
ಒಗ್ಗರಣೆಗೆ ಉದ್ದಿನಬೇಳೆ, ಕಡಲೆಬೇಳೆ, ಸಾಸಿವೆ ಮತ್ತು ಎಣ್ಣೆ ಹಾಕಿ ಚಟಗುಟ್ಟಿದ ನಂತರ ಈ ಪದಾರ್ಥಗಳನ್ನು ಹಿಟ್ಟಿಗೆ ಹಾಕಿ ಮಿಶ್ರಣ ಮಾಡಬೇಕು.
ಹೆಚ್ಚಿಟ್ಟುಕೊಂಡ ಸಬ್ಬಸ್ಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಈರುಳ್ಳಿ, ಉಪ್ಪು ಸೇರಿಸಿ ಹಿಟ್ಟಿಗೆ ಹಾಕಿಕೊಳ್ಳಬೇಕು.
ಬಿಸಿ ಮಾಡಿದ ಪಡ್ಡಿನ ಕಾವಲಿಗೆ ಎಣ್ಣೆ ಹಾಕಿ ಗುಳಿ ತುಂಬುವಂತೆ ಸಿದ್ಧಪಡಿಸಿದ ಹಿಟ್ಟು ತುಂಬಿ ಚೆನ್ನಾಗಿ ಬೇಯಿಸಿದರೆ ಸಬ್ಬಸ್ಸಿಗೆ ಸೊಪ್ಪಿನ ಗುಳಿಯಪ್ಪ ಸವಿಯಲು ಸಿದ್ಧ.