ಸನಾತನ ಧರ್ಮದ ಕುರಿತಂತೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಡಿಎಂಕೆ ಸಂಸದ ಎ. ರಾಜಾ ಅವರ ಹೇಳಿಕೆ ಈಗ ದೊಡ್ಡ ಕೋಲಾಹಲ ಸೃಷ್ಟಿಸಿದ್ದು, ಬಿಜೆಪಿ ಮತ್ತದರ ಮಿತ್ರ ಪಕ್ಷಗಳ ನಾಯಕರು, ವಿಪಕ್ಷಗಳ ವಿರುದ್ಧ ಮುಗಿಬಿದ್ದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಸಂದೇಶ ಪೋಸ್ಟ್ ಮಾಡಿರುವ ಬಿಜೆಪಿ, ವಿಪಕ್ಷಗಳು ಹಿಂದೂ ಫೋಬಿಯಾದಿಂದ ಬಳಲುತ್ತಿವೆ. ಸನಾತನ ಧರ್ಮದ ಕುರಿತಂತೆ ಡಿಎಂಕೆ ಮುಖಂಡರು ನೀಡಿರುವ ಹೇಳಿಕೆ ಅತಿರೇಕದಿಂದ ಕೂಡಿದೆ ಹಾಗೂ ಅವರ ಮಾನಸಿಕ ದಿವಾಳಿತನವನ್ನು ತೋರಿಸುತ್ತಿದೆ ಎಂದು ಪ್ರತಿಕ್ರಿಯಿಸಿದೆ.
ಇನ್ನು ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಪಾಟ್ನಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೇಳೆ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದು, ಇತ್ತೀಚೆಗೆ ಮುಂಬೈನಲ್ಲಿ ನಡೆದ I.N.D.I.A. ಸಭೆಯಲ್ಲಿ ಹಿಂದೂಗಳಿಗೆ ಕಳಂಕ ತರುವ ನಿರ್ಧಾರ ಕೈಗೊಳ್ಳಲಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.