ದರೋಡೆಕೋರನೊಬ್ಬ ಸತ್ತ ಸೊಳ್ಳೆಗಳನ್ನು ಬಾಟಲಿಯಲ್ಲಿ ತುಂಬಿಕೊಂಡು ಮುಂಬೈನ ಸೆಶನ್ಸ್ ಕೋರ್ಟ್‌ಗೆ ತಂದಿದ್ದಾನೆ. ಎಜಾಜ್ ಲಕ್ಡಾವಾಲಾ ಎಂಬ ಗ್ಯಾಂಗ್‌ಸ್ಟರ್ ಜೈಲಿನಲ್ಲಿ ಸೊಳ್ಳೆ ಪರದೆ ಬೇಕೆಂದು ಹಠ ಹಿಡಿದಿದ್ದ. ಸೆರೆಮನೆಯಲ್ಲಿರೋ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಸತ್ತ ಸೊಳ್ಳೆಗಳನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಕೊಂಡು ತಂದಿದ್ದಾನೆ. ಆದರೆ ದರೋಡೆಕೋರನ ಈ ಪ್ಲಾನ್ ಕೂಡ ವರ್ಕೌಟ್ ಆಗಲೇ ಇಲ್ಲ, ಕೋರ್ಟ್ ಆತನ ಮನವಿಯನ್ನು ತಿರಸ್ಕರಿಸಿದೆ.
ಆರೋಪಿ ಎಜಾಜ್ ಲಕ್ಡಾವಾಲಾ, ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಈತ ದಾವೂದ್ ಇಬ್ರಾಹಿಂನ ಮಾಜಿ ಸಹಚರ. ಈತನನ್ನು 2020ರ ಜನವರಿಯಲ್ಲಿ ಬಂಧಿಸಿದ್ದು, ಅಂದಿನಿಂದ ನವಿ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಲಾಗಿದೆ.
ಸೊಳ್ಳೆ ಪರದೆ ಬಳಸಲು ಅನುಮತಿ ನೀಡುವಂತೆ ಕೋರಿ ಇತ್ತೀಚೆಗೆ ನ್ಯಾಯಾಲಯಕ್ಕೆ ಈತ ಅರ್ಜಿ ಸಲ್ಲಿಸಿದ್ದ. 2020ರಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದಾಗ ಸೊಳ್ಳೆ ಪರದೆ ಬಳಸಲು ಅನುಮತಿ ನೀಡಲಾಗಿತ್ತು, ಆದರೆ ಈ ವರ್ಷದ ಮೇ ತಿಂಗಳಲ್ಲಿ ಭದ್ರತೆಯ ಕಾರಣ ನೀಡಿ ಜೈಲು ಅಧಿಕಾರಿಗಳು ಸೊಳ್ಳೆ ಪರದೆಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಲಕ್ಡಾವಾಲಾ ಅರ್ಜಿಯಲ್ಲಿ ಆರೋಪಿಸಿದ್ದ.
ಗುರುವಾರ ಆತನನ್ನು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯ್ತು. ಈ ವೇಳೆ ಆತ ಸತ್ತ ಸೊಳ್ಳೆಗಳಿಂದ ತುಂಬಿದ ಪ್ಲಾಸ್ಟಿಕ್ ಬಾಟಲಿಯನ್ನು ಕೋರ್ಟ್ ಮುಂದೆ ಪ್ರದರ್ಶಿಸಿದ್ದಾನೆ. ತಲೋಜಾ ಜೈಲಿನ ಕೈದಿಗಳು ಸೊಳ್ಳೆ ಕಾಟದಿಂದ ಕಂಗಾಲಾಗಿದ್ದಾರೆಂದು ಹೇಳಿದ್ದಾನೆ. ಆದರೆ ಆದರೆ ಭದ್ರತಾ ಕಾರಣಗಳಿಗಾಗಿ ಸೊಳ್ಳೆ ಪರದೆ ಕೊಡಲು ಸಾಧ್ಯವಿಲ್ಲವೆಂದು ಜೈಲು ಅಧಿಕಾರಿಗಳು ವಿರೋಧಿಸಿದ್ದಾರೆ.
ಹಾಗಾಗಿ ಲಕ್ಡಾವಾಲಾನ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ, ಆರೋಪಿ ಓಡೋಮಸ್ ಮತ್ತು ಇತರ ಸೊಳ್ಳೆ ನಿವಾರಕಗಳನ್ನು ಬಳಸಬಹುದು ಎಂದು ಹೇಳಿದೆ. ತಲೋಜಾ ಜೈಲಿನ ಹಲವಾರು ವಿಚಾರಣಾಧೀನ ಕೈದಿಗಳು ಸಹ ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕೆಲವು ಪ್ರಕರಣಗಳಲ್ಲಿ ಅನುಮತಿ ನೀಡಿದ್ದು, ಇನ್ನು ಕೆಲವು ಪ್ರಕರಣಗಳಲ್ಲಿ ಸೊಳ್ಳೆ ಪರದೆ ಬಳಕೆಯನ್ನು ನಿರಾಕರಿಸಲಾಗಿದೆ.