ಸುಗ್ಗಿ ಹಬ್ಬ ಸಂಕ್ರಾಂತಿ ಸಡಗರ ಎಲ್ಲೆಡೆ ಕಂಡು ಬಂದಿದೆ. ಬೆಲೆ ಏರಿಕೆ ನಡುವೆಯೂ ಜನ ಅಗತ್ಯ ವಸ್ತುಗಳನ್ನು ಖರೀದಿಸಿದ್ದು, ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ.
ವರ್ಷದ ಮೊದಲ ಹಬ್ಬವೆಂದು ಹೇಳಲಾಗುವ ಸಂಕ್ರಾಂತಿಯನ್ನು ವಿವಿಧ ಹೆಸರಿನಿಂದ ವಿವಿಧ ರಾಜ್ಯಗಳಲ್ಲಿ ಆಚರಿಸಿದರೂ, ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಭ್ರಮ, ಸಡಗರ ಜೋರಾಗಿರುತ್ತದೆ.
ಮಕರ ಸಂಕ್ರಾಂತಿ, ಸುಗ್ಗಿ ಹಬ್ಬ, ಪೊಂಗಲ್, ಸಂಕ್ರಾಂತಿ, ಲೋಹ್ರಿ, ಉತ್ತರಾಯಣ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ.
ಸುಗ್ಗಿ ಹಬ್ಬವಾಗಿರುವ ಸಂಕ್ರಾಂತಿಯನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯಲಾಗುತ್ತದೆ. ತಮಿಳುನಾಡಿನಲ್ಲಿ ಪೊಂಗಲ್ ಆಚರಣೆ ವೇಳೆ ಹಾಲು ಮಡಿಕೆಯಿಂದ ಉಕ್ಕಿ ಬಂದರೆ, ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದ್ದು, ವಿಶೇಷವಾಗಿ ಅಲಂಕರಿಸಿದ ಮಡಕೆಗಳಲ್ಲಿ ಹಾಲು ಕಾಯಿಸಲಾಗುತ್ತದೆ. ಉಕ್ಕಿ ಬಂದ ಬಳಿಕ ಪೂಜೆ ನೆರವೇರಿಸಲಾಗುತ್ತದೆ.
ಸಂಕ್ರಾಂತಿಯಂದು ಎಳ್ಳು, ಬೆಲ್ಲ, ಕಬ್ಬು ಸಕ್ಕರೆ ಅಚ್ಚು ಮೊದಲಾದವುಗಳನ್ನು ಹಂಚಲಾಗುತ್ತದೆ. ಇನ್ನು ರೈತರಿಗೂ ಇದು ಸುಗ್ಗಿ ಹಬ್ಬ. ರೈತರು ತಮ್ಮ ಕೃಷಿ ಪರಿಕರಗಳನ್ನು ಪೂಜಿಸುತ್ತಾರೆ. ಸಂಕ್ರಾಂತಿ ಸಂದರ್ಭದಲ್ಲಿ ಎತ್ತುಗಳನ್ನು ಬೆಂಕಿಯಲ್ಲಿ(ಕಿಚ್ಚು) ಹಾಯಿಸಲಾಗುತ್ತದೆ. ರೈತರು ಬೆಳೆದ ಬೆಳೆಯನ್ನು ರಾಶಿ ಮಾಡಿ ಸುಗ್ಗಿ ಹಬ್ಬವನ್ನು ಆಚರಿಸುವುದನ್ನು ನೋಡುವುದೇ ಚೆಂದ.
ಅಲ್ಲದೇ, ಮಕರ ಸಂಕ್ರಾಂತಿ ದಿನ ಸೂರ್ಯ ತನ್ನ ಪಥವನ್ನು ಬದಲಿಸುತ್ತಾನೆ. ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ನೆರವೇರಲಿದೆ. ಒಟ್ಟಾರೆ ಸಂಕ್ರಾಂತಿ ಹಬ್ಬ ಬಂತೆಂದರೆ ಸಡಗರ ತಂತು ಎಂದು ಹೇಳಲಾಗುತ್ತದೆ.