ಪ್ರಸ್ತುತ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿದ್ದರೆ ಪ್ರತಿಪಕ್ಷಗಳ ಪಟ್ಟಿಗೆ ಸರ್ಕಾರ ತಿರುಗೇಟು ನೀಡುತ್ತಿದೆ. ಇಂತಹ ಮಹತ್ವದ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅಧಿವೇಶನಕ್ಕೆ ಗೈರು ಹಾಜರಾಗಿರುವುದು ಕುತೂಹಲ ಮೂಡಿಸಿದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ ವೇಳೆ ಈಶ್ವರಪ್ಪ ಕಾಲು ನೋವಿನ ಕಾರಣ ಹೇಳಿದ್ದಾರೆ. ಆದರೆ ತಮ್ಮ ಸ್ವಕ್ಷೇತ್ರ ಶಿವಮೊಗ್ಗದಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಅವರು, ಅಧಿವೇಶನಕ್ಕೆ ಹಾಜರಾಗಲು ಮಾತ್ರ ಮುಂದಾಗುತ್ತಿಲ್ಲ.
ಮೂಲಗಳ ಪ್ರಕಾರ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತಮಗೆ ಕ್ಲೀನ್ ಚಿಟ್ ಸಿಕ್ಕ ಬಳಿಕ ಸಚಿವ ಸ್ಥಾನ ಮತ್ತೆ ಸಿಗಬಹುದೆಂಬ ವಿಶ್ವಾಸ ಹೊಂದಿದ್ದ ಈಶ್ವರಪ್ಪನವರು, ಈ ಕುರಿತು ಯಾವುದೇ ಸೂಚನೆ ಇಲ್ಲದಿರುವ ಕಾರಣ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.
ಆದರೆ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಲವು ಬಾರಿ ದೆಹಲಿ ಯಾತ್ರೆ ಕೈಗೊಂಡರೂ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿಸಿಲ್ಲ. ಹೀಗಾಗಿ ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲವೆಂಬ ಮಾತುಗಳು ಕೇಳಿ ಬರುತ್ತಿದ್ದು, ಮುನಿಸಿಕೊಂಡಿರುವ ಈಶ್ವರಪ್ಪನವರಿಗೆ ಬಿಜೆಪಿ ನಾಯಕರು ಯಾವ ಭರವಸೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.