ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪನವರ ಹೆಸರು ಕೇಳಿ ಬಂದಿರುವ ಕಾರಣ ಅಂತಿಮವಾಗಿ ಅವರು ರಾಜೀನಾಮೆ ನೀಡಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಯಾವುದೇ ಕಾರಣಕ್ಕೂ ತಾವು ರಾಜೀನಾಮೆ ನೀಡುವುದಿಲ್ಲವೆಂದು ಹೇಳುತ್ತಿದ್ದ ಈಶ್ವರಪ್ಪ, ಇದೀಗ ಬಿಜೆಪಿ ಹೈಕಮಾಂಡ್ ಸೂಚನೆ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ, ತಾವು ಯಾವುದೇ ತಪ್ಪೆಸಗಿಲ್ಲ. ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಲಿದ್ದೇನೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ಬಳಿಕ ಆರೋಪಮುಕ್ತನಾಗಿ ಬರುತ್ತೇನೆ ಎಂದು ಹೇಳಿದರು.
ಇದರ ಮಧ್ಯೆ ಈಶ್ವರಪ್ಪ ರಾಜೀನಾಮೆ ಹಾಗೂ ಬಂಧನಕ್ಕೆ ಆಗ್ರಹಿಸಿ ಆಹೋರಾತ್ರಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ನಾಯಕರು, ಇದೀಗ ಈಶ್ವರಪ್ಪ ರಾಜೀನಾಮೆ ಘೋಷಣೆ ಬೆನ್ನಲ್ಲೇ ಅವರ ಬಂಧನವಾಗುವವರೆಗೂ ಹೋರಾಟ ಮುಂದುವರೆಸುವುದಾಗಿ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಹೋರಾಟ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಅಲ್ಲಿಯೇ ಆರೋಗ್ಯ ತಪಾಸಣೆ ನಡೆಸಲಾಗಿದೆ.