ಬೆಂಗಳೂರು : ಸಿಎಂ ಬಸವರಾಜ್ ಬೊಮ್ಮಾಯಿ ಎದುರೇ ಸಚಿವ ಅಶ್ವತ್ಥ್ ನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್ ಅವರ ಮಧ್ಯೆ ನಡೆದ ಜಗಳಕ್ಕೆ ಎರಡೂ ಪಕ್ಷಗಳ ಮಧ್ಯೆ ಆರೋಪ, ಪ್ರತ್ಯಾರೋಪ ಆರಂಭವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಡಿಕೆ ಬ್ರದರ್ಸ್ ವಿರುದ್ಧ ಗುಡುಗಿದೆ. ಇಂತಹ ಜನರಿಗೆ ಅಧಿಕಾರ ನೀಡಿದರೆ, ಕಂಡ ಕಂಡ ಜಾಗಕ್ಕೆ ಬೇಲಿ ಹಾಕುತ್ತಾರೆ. ಇವರು ಅಕ್ರಮ ಸಂಪತ್ತು, ತೋಳ್ಬಲದಿಂದಾಗಿ ಮೆರೆಯುತ್ತಿದ್ದು, ರಾಜ್ಯದ ಅಧಿಕಾರ ಹಿಡಿದು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದೆ.
ಅಲ್ಲದೇ, ಈ ಘಟನೆ ಕುರಿತು ಟ್ವೀಟ್ ಮಾಡಿರುವ ಸಚಿವ ಅಶ್ವತ್ಥ್ ನಾರಾಯಣ, ಅಧಿಕಾರ ನೀಡಿರುವ ರಾಮನಗರ ಹೆಸರನ್ನು ಅಭಿವೃದ್ಧಿ ಹೆಸರಿನಿಂದ ಸೂಚಿಸಬೇಕು. ಆದರೆ, ಇಬ್ಬರು ರಾಮನಗರದ ನಾಯಕರು, ಗೂಂಡಾಗಿರಿಯಿಂದ ಸೂಚಿಸುವಂತೆ ಮಾಡುತ್ತಿದ್ದಾರೆ. ಇಂತಹ ಅನಾಗರಿಕ ವರ್ತನೆ ಕೇವಲ ಒಂದು ಪಕ್ಷದಿಂದ ಮಾತ್ರ ಸಾಧ್ಯ. ಇನ್ನಾದರೂ ಅಭಿವೃದ್ಧಿ ವಿಚಾರವಾಗಿ ಹೋರಾಟ ನಡೆಯಲಿ ಎಂದು ಹೇಳಿದ್ದಾರೆ.
ಅಲ್ಲದೇ, ಈ ಘಟನೆ ಕುರಿತಂತೆ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲು ಹಾಗೂ ಕಂದಾಯ ಸಚಿವ ಆರ್. ಅಶೋಕ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.