ಶಿವಮೊಗ್ಗ: ಸೋದರ ಹರ್ಷನ ಕೊಲೆ ಮಾಡಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳು ವಿಡಿಯೋ ಕಾಲ್ ಮಾಡಿ ಮಾತನಾಡಲು ಹಾಗೂ ಅವರಿಗೆ ರಾಜಾತಿಥ್ಯ ನೀಡುತ್ತಿರುವ ಜೈಲು ಸಿಬ್ಬಂದಿಗಳ ಮೇಲೆ ಕೈಗೊಂಡ ಕ್ರಮದ ಬಗ್ಗೆ ಗೃಹ ಸಚಿವರು ಸರಿಯಾಗಿ ಹೇಳದೆ ಇರುವುದರಿಂದ ಅಸಮಾಧಾನವಾಗಿದೆ ಎಂದು ಹರ್ಷ ಸೋದರಿ ಅಶ್ವಿನಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಆರೋಪಿಗಳು ವಿಡಿಯೋ ಕಾಲ್ ಮಾಡಿ ಅವರ ಕುಟುಂಬದವರೊಂದಿಗೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಖೈದಿಗಳಿಗೆ ಮೊಬೈಲ್ ಕೊಡಬಾರದೆಂಬ ಕಾನೂನು ಇದ್ದರೂ ಕೂಡ ಅದನ್ನು ಉಲ್ಲಂಘನೆ ಮಾಡಿ ಕೆಲಸ ಅಧಿಕಾರಿಗಳು ಮೊಬೈಲ್ ನೀಡಿದ್ದಾರೆ ಎಂದರು.
ಜೈಲಿನಲ್ಲಿರುವವರಿಗೆ ರಾಜಾತಿಥ್ಯ ನೀಡುತ್ತಿರುವ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ ಕೋರಲಾಗಿತ್ತು. ಹೀಗಾಗಿ ಅವರ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ ಗೃಹಸಚಿವರಲ್ಲಿ ಕೇಳಲು ಬೆಂಗಳೂರಿಗೆ ಹೋಗಿದ್ದೆ. ಆದರೆ ಸಚಿವರು ಗಟ್ಟಿ ದನಿಯಲ್ಲಿ ಹೆದರಿಸಿ ಹೊರಗೆ ಕಳಿಸಿದರು. ಇದರಿಂದ ತಮಗೆ ನೋವಾಗಿದೆ ಎಂದರು.
ಇದರ ಹೊರತಾಗಿ ಸರ್ಕಾರ, ಗೃಹಸಚಿವರು ಅಥವಾ ಇನ್ಯಾವುದೇ ಸಂಘಟನೆಗಳ ಬಗ್ಗೆ ಅಸಮಾಧಾನವಿಲ್ಲ. ಎಲ್ಲಾ ಹಿಂದೂಪರ ಸಂಘಟನೆಗಳು ಹರ್ಷನ ವಿಚಾರದಲ್ಲಿ ಬೆಂಬಲಿಸಿವೆ. ಮುಂದೆಯೂ ತಮ್ಮ ಪರವಾಗಿ ನಿಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿದ್ದ ಹಿಂದು ಜಾಗರಣಾ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಸತೀಶ್ ದಾವಣಗೆರೆ ಮಾತನಾಡಿ, ರಾಜ್ಯದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಹತ್ಯೆ ಖಂಡಿಸಿ ಜಿಲ್ಲಾಧಿಕಾರಿ ಎದರು ಧರಣಿ ನಡೆಸಲಾಗುತ್ತದೆ ಎಂದರು.