ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಭರ್ಜರಿ ಗೆಲುವು ಸಾಧಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಗಣನೀಯ ಕೊಡುಗೆ ನೀಡುವ ಲೆಕ್ಕಾಚಾರ ಹೊಂದಿದ್ದ ಕೇಸರಿ ಪಾಳಯ, ಕಳೆದ ಮೂರು ದಿನಗಳಿಂದ ಮೂವರು ಸಚಿವರು ಹಾಗೂ ಹಲವು ಶಾಸಕರು ರಾಜೀನಾಮೆ ನೀಡಿದ ಕಾರಣ ತಮ್ಮ ಲೆಕ್ಕಾಚಾರ ಉಲ್ಟಾ ಆಗುವ ಆತಂಕದಲ್ಲಿದೆ.
ಚುನಾವಣೆ ಘೋಷಣೆಗೂ ಮುನ್ನವೇ ಹಲವು ರ್ಯಾಲಿಗಳನ್ನು ಮಾಡಿದ್ದ ಬಿಜೆಪಿ ನಾಯಕರು, ಈ ಬಾರಿಯೂ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದರು. ಆದರೆ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನಡೆಯುತ್ತಿರುವ ಕೆಲ ಬೆಳವಣಿಗೆಗಳಿಂದ ಕೇಸರಿ ಪಾಳೆಯ ತತ್ತರಿಸಿ ಹೋಗಿದೆ. ಮೊದಲಿಗೆ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸಮಾಜವಾದಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಇದರ ಬೆನ್ನಲ್ಲೇ ಇವರನ್ನು ಬೆಂಬಲಿಸಿ ಮೂವರು ಶಾಸಕರು ರಾಜೀನಾಮೆ ನೀಡಿದ್ದರು.
ಇದಾದ ಬಳಿಕ ಮತ್ತೊಬ್ಬ ಸಚಿವ ದಾರಾ ಸಿಂಗ್ ಚೌಹಾನ್ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದು, ಮರುದಿನವೇ ಮತ್ತೊಬ್ಬ ಸಚಿವ ಧರಂಸಿಂಗ್ ಸೈನಿ ರಾಜೀನಾಮೆ ನೀಡಿದ್ದರು. ಈ ಎಲ್ಲರೂ ಸಹ ಸಮಾಜವಾದಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಈ ಬೆಳವಣಿಗೆಯಿಂದ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಹಾಗೂ ಬಹುಜನ ಸಮಾಜ ಪಕ್ಷದ ಹಲವು ನಾಯಕರು ಸಮಾಜವಾದಿ ಪಕ್ಷದ ಬಾಗಿಲು ತಟ್ಟುತ್ತಿದ್ದು, ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಅಧಿಕಾರಕ್ಕೇರುವ ಕನಸು ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಬಿಜೆಪಿ ಕೇಂದ್ರ ನಾಯಕರು ಉತ್ತರ ಪ್ರದೇಶದ ರಾಜಕೀಯ ಬೆಳವಣಿಗೆಗಳ ಬಗ್ಗೆ ತೀವ್ರ ನಿಗಾ ಇರಿಸಿದ್ದಾರೆ ಎಂದು ಹೇಳಲಾಗಿದೆ.