ಪ್ರಪಂಚದಾದ್ಯಂತ ಬಹುಪಾಲು ಜನರು ಎಲ್ಲಾ ಕೆಲಸಗಳಿಗೆ ಬಲಗೈ ಬಳಸುತ್ತಾರೆ. ಕೆಲವರು ಮಾತ್ರ ಎಡಗೈಯನ್ನು ಹೆಚ್ಚಾಗಿ ಬಳಸುತ್ತಾರೆ. ಆದಾಗ್ಯೂ, ದೈನಂದಿನ ಕಾರ್ಯಗಳಿಗಾಗಿ ತಮ್ಮ ಎರಡೂ ಕೈಗಳನ್ನು ಬಳಸುವ ಸಾಮರ್ಥ್ಯವನ್ನು ಹೊಂದಿರುವರನ್ನು ನೋಡಿದ್ದೀರಾ?
ಅಂತಹ ಅಪರೂಪದ ವ್ಯಕ್ತಿಗಳಲ್ಲೊಬ್ಬರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಒಟ್ಟೊಟ್ಟಿಗೆ ಎರಡೂ ಕೈಗಳನ್ನೂ ಬಳಸಬಲ್ಲ ಚತುರ ಇವರು. ಎರಡೂ ಕೈಗಳಲ್ಲಿ ಊಟ ಮಾಡ್ತಿರೋ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಚಿನ್ ಬಲಗೈ ಬ್ಯಾಟ್ಸ್‌ಮನ್ ಆಗಿದ್ದರೂ, ಬರವಣಿಗೆ ಮಾಡುವುದು ಎಡಗೈನಲ್ಲಿ. ಊಟ ಮಾಡುವ ವೇಳೆ ಫೋರ್ಕ್ ಮತ್ತು ಚಾಕುವನ್ನು ಎಡಗೈನಲ್ಲಿ ಬಳಸುತ್ತಾರೆ. ಚಾಪ್ ಸ್ಟಿಕ್ ಬಳಸುವಾಗ ಅವರಿಗೆ ಎಡಗೈ ಮುಂದೆ ಬರುತ್ತದೆ. ಹಾಗಾಗಿ ತಾನೊಬ್ಬ ಸಂಕೀರ್ಣ ವ್ಯಕ್ತಿ ಅಂತಾ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ. ಸುಮಾರು 3 ಮಿಲಿಯನ್ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ವಿಭಿನ್ನ ಟ್ಯಾಲೆಂಟ್ ನೋಡಿ ದಂಗಾಗಿದ್ದಾರೆ.