ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಹಲೋಕ ತ್ಯಜಿಸಿ ವರ್ಷ ಕಳೆಯುತ್ತಾ ಬಂದರೂ ಸಹ ಜನಮಾನಸದಲ್ಲಿ ಅವರು ಚಿರಸ್ಥಾಯಿಯಾಗಿದ್ದಾರೆ. ಪ್ರತಿಯೊಂದು ಊರುಗಳಲ್ಲೂ ಅವರ ಪ್ರತಿಮೆ, ಕಟೌಟ್ ರಾರಾಜಿಸುತ್ತಿದ್ದು ಅಪ್ಪು ಅವರನ್ನು ದಿನನಿತ್ಯ ಸ್ಮರಿಸಲಾಗುತ್ತಿದೆ.
ಇದರ ಮಧ್ಯೆ ಇಂದು ಪುನೀತ್ ರಾಜಕುಮಾರ್ ಅವರ ಅಭಿನಯದ ‘ಗಂಧದಗುಡಿ’ ಸಾಕ್ಷ್ಯ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಅಲ್ಲದೆ ನೆಚ್ಚಿನ ನಟ ತೆರೆ ಮೇಲೆ ಬಂದ ವೇಳೆ ಭಾವುಕರಾಗಿದ್ದಾರೆ. ‘ಗಂಧದಗುಡಿ’ ಯಲ್ಲಿ ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ರಮಣೀಯವಾಗಿ ಸೆರೆ ಹಿಡಿಯಲಾಗಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದೇಶ – ವಿದೇಶಗಳಲ್ಲೂ ಈ ಚಿತ್ರ ಬಿಡುಗಡೆಯಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಕರ್ನಾಟಕದ ಇನ್ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ಪ್ರದರ್ಶನಗೊಳ್ಳುತ್ತಿದ್ದು, ಎಲ್ಲಾ ಶೋಗಳು ಹೌಸ್ ಫುಲ್ ಆಗಿವೆ.
‘ಗಂಧದ ಗುಡಿ’ ಕುರಿತಂತೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದರಲ್ಲಿನ ದೃಶ್ಯ ಒಂದನ್ನು ಶಿವಮೊಗ್ಗ ತಾಲೂಕು ಸಕ್ರೆಬೈಲಿನ ಆನೆ ಬಿಡಾರದಲ್ಲಿ ಚಿತ್ರೀಕರಿಸಲಾಗಿದೆ. 2021ರ ಸೆಪ್ಟೆಂಬರ್ 1 ರಂದು ಚಿತ್ರೀಕರಣ ನಡೆದಿದ್ದು, ಅಂದು ಅವರನ್ನು ಪ್ರತ್ಯಕ್ಷವಾಗಿ ನೋಡಿದ್ದ ಅಭಿಮಾನಿಗಳು ಆ ಕ್ಷಣವನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.