ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಸಹಜವಾಗಿಯೇ ಸಕ್ಕರೆ ಕಾಯಿಲೆ ಬಗ್ಗೆ ಜನರಲ್ಲಿ ಭಯ ಕಾಡ್ತಾ ಇದೆ. ಮಧುಮೇಹ ರೋಗಿಗಳು ಸಕ್ಕರೆ ಸೇವನೆ ಮಾಡುವಂತಿಲ್ಲ, ಸಿಹಿ ಪದಾರ್ಥಗಳನ್ನು ತಿನ್ನುವಂತಿಲ್ಲ. ಆದರೆ ಈ ಕಾಯಿಲೆಯಿಂದ ದೂರವಿರಬೇಕು ಎಂಬ ಉದ್ದೇಶದಿಂದ ಇತರರು ಕೂಡ ಸಕ್ಕರೆಯಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸುತ್ತಾರೆ. ಸಕ್ಕರೆ ಸೇವನೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡುತ್ತಾರೆ. ಆದರೆ ಸಕ್ಕರೆಯನ್ನು ಸಂಪೂರ್ಣವಾಗಿ ಬಿಡುವುದು ಸರಿಯಲ್ಲ. ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಸಕ್ಕರೆಯಲ್ಲಿ ಎಷ್ಟು ವಿಧಗಳಿವೆ?
ಸಕ್ಕರೆಯಲ್ಲಿ ಎರಡು ವಿಧಗಳಿವೆ. ಒಂದು ನೈಸರ್ಗಿಕ ಮತ್ತು ಇನ್ನೊಂದು ಸಂಸ್ಕರಿಸಿದ ಸಕ್ಕರೆ. ಮಾವು, ಅನಾನಸ್, ಲಿಚಿ, ತೆಂಗಿನಕಾಯಿಯಂತಹ ಹಣ್ಣುಗಳಿಂದ ನಾವು ನೈಸರ್ಗಿಕ ಸಕ್ಕರೆಯನ್ನು ಪಡೆಯುತ್ತೇವೆ. ಸಂಸ್ಕರಿಸಿದ ಸಕ್ಕರೆಯನ್ನು ಕಬ್ಬು ಮತ್ತು ಬೀಟ್ರೂಟ್ನಿಂದ ತಯಾರಿಸಲಾಗುತ್ತದೆ. ನಿಯಂತ್ರಣದಲ್ಲಿ ಸಕ್ಕರೆ ತಿನ್ನುವುದು ಸರಿಯಾದ ನಿರ್ಧಾರ. ಆದರೆ ಅದನ್ನು ಸಂಪೂರ್ಣವಾಗಿ ತ್ಯಜಿಸಬಾರದು. ಕಬ್ಬು ಮತ್ತು ಸಿಹಿ ಬೀಟ್ರೂಟ್ ಗಡ್ಡೆಗಳಿಂದ ಸಂಸ್ಕರಿಸಿದ ಸಕ್ಕರೆಯಲ್ಲಿ ಕ್ಯಾಲೋರಿ ಹೆಚ್ಚಾಗಿರುತ್ತದೆ, ಆದರೆ ಇದು ಯಾವುದೇ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿಲ್ಲ. ನೈಸರ್ಗಿಕ ಸಕ್ಕರೆಯಲ್ಲಿ ವಿಟಮಿನ್ಗಳು ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಸಿಹಿ ಪದಾರ್ಥಗಳ ರುಚಿ ನಮ್ಮೆಲ್ಲರನ್ನೂ ಆಕರ್ಷಿಸುತ್ತದೆ, ಆದ್ದರಿಂದ ಅದನ್ನು ಸಂಪೂರ್ಣವಾಗಿ ಬಿಡುವುದು ಸುಲಭದ ನಿರ್ಧಾರವಲ್ಲ. ನೀವು ಅದನ್ನು ದೈನಂದಿನ ಆಹಾರದಿಂದ ಸಂಪೂರ್ಣವಾಗಿ ತೆಗೆದುಹಾಕಿದರೆ ತೊಂದರೆ ಅನುಭವಿಸಬೇಕಾಗಬಹುದು.
ಸಕ್ಕರೆಯನ್ನು ತ್ಯಜಿಸುವುದರಿಂದ ಆಗುವ ಅನಾನುಕೂಲಗಳು
ಸಕ್ಕರೆ ಸೇವನೆಯನ್ನು ಹಠಾತ್ತನೆ ನಿಲ್ಲಿಸಿದರೆ, ಚಟವನ್ನು ತೊರೆದ ನಂತರ ದೇಹದಲ್ಲಾಗುವ ಪರಿಣಾಮವನ್ನು ಎದುರಿಸುತ್ತದೆ. ಅನೇಕ ಸಂಶೋಧನೆಗಳಲ್ಲಿ ಇದು ಬಹಿರಂಗವಾಗಿದೆ. ಬೇಗನೆ ದಣಿವಾಗುವುದು, ತಲೆನೋವು ಉಂಟಾಗಬಹುದು.
ನೈಸರ್ಗಿಕ ಸಕ್ಕರೆಯನ್ನು ಬಿಟ್ಟುಬಿಡಬೇಡಿ
ಸಕ್ಕರೆಯನ್ನು ತ್ಯಜಿಸುವುದು ನಿಮ್ಮ ದೇಹದ ಮೇಲೆ ಕ್ರಮೇಣ ಪರಿಣಾಮ ಬೀರುತ್ತದೆ. ಇದು ಶಕ್ತಿಯ ಮೂಲವಾಗಿರುವುದರಿಂದ, ಅದರಿಂದ ದೂರವನ್ನು ಕಾಯ್ದುಕೊಳ್ಳುವುದರಿಂದ ಆಯಾಸ ಉಂಟಾಗುತ್ತದೆ. ಸಕ್ಕರೆಯನ್ನು ತ್ಯಜಿಸಿದ ನಂತರ ಹೆಚ್ಚುವರಿ ಇನ್ಸುಲಿನ್ ದೇಹದಿಂದ ಕಡಿಮೆಯಾಗಲು ಪ್ರಾರಂಭಿಸುತ್ತದೆ. ನೀವು ಸಂಸ್ಕರಿಸಿದ ಸಕ್ಕರೆಯನ್ನು ತಿನ್ನುವುದನ್ನು ನಿಲ್ಲಿಸಿದರೂ, ಹಣ್ಣುಗಳನ್ನು ಸೇವಿಸುವುದನ್ನು ಮುಂದುವರಿಸಿ. ಅದು ನಿಮಗೆ ನೈಸರ್ಗಿಕ ಸಕ್ಕರೆಯನ್ನು ನೀಡುತ್ತದೆ ಮತ್ತು ದೇಹದಲ್ಲಿ ಶಕ್ತಿಯನ್ನು ಉಳಿಸಿಕೊಳ್ಳುತ್ತದೆ.