ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಕ್ತದಲ್ಲಿ ಹೆಚ್ಚಿನ ಸಕ್ಕರೆ ಅಂಶದಿಂದಾಗಿ, ಪಾದಗಳಲ್ಲಿ ಗುಳ್ಳೆಗಳು, ದೃಷ್ಟಿ ಕಳೆದುಕೊಳ್ಳುವುದು, ಹಠಾತ್ ತೂಕ ನಷ್ಟ, ಹೃದ್ರೋಗ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮುಂತಾದ ಗಂಭೀರ ಕಾಯಿಲೆಗಳ ಅಪಾಯವಿರುತ್ತದೆ. ಆದ್ದರಿಂದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇದಕ್ಕಾಗಿ ಮನೆಯಲ್ಲೇ ಪಾನೀಯವೊಂದನ್ನು ತಯಾರಿಸಿಕೊಂಡು ಸೇವನೆ ಮಾಡಬಹುದು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮೆಂತ್ಯ ನೀರು
ಮೆಂತ್ಯ ಬೀಜಗಳು ಮಧುಮೇಹವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ. ಮೆಂತ್ಯ ಬೀಜಗಳಲ್ಲಿ ಕರಗುವ ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಲು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೆಂತ್ಯವು ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಯನ್ನು ನಿಧಾನವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುವುದಿಲ್ಲ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಮೆಂತ್ಯ ನೀರನ್ನು ಸೇವಿಸಬೇಕು.
ಮೆಂತ್ಯ ನೀರನ್ನು ತಯಾರಿಸುವುದು ಹೇಗೆ ?
ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಮೆಂತ್ಯದ ಕಾಳನ್ನು ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ. ಇದಲ್ಲದೆ ಪ್ರತಿದಿನ ಬೆಳಗ್ಗೆ ಒಂದು ಲೋಟ ನೀರಿನಲ್ಲಿ ಸ್ವಲ್ಪ ಮೆಂತ್ಯದ ಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಿ ಅದನ್ನು ಸಹ ಫಿಲ್ಟರ್ ಮಾಡಿ ಕುಡಿಯಬಹುದು. ಮೆಂತ್ಯವನ್ನು ಅಡುಗೆಗೆ ಬಳಸುವ ಮೂಲಕವೂ ಸೇವನೆ ಮಾಡಬಹುದು. ದೋಸೆ ಇತ್ಯಾದಿಗಳಲ್ಲಿ ಬಳಸಬಹುದು. ಮೆಂತ್ಯದ ಕಾಳುಗಳನ್ನು ನೀರಿನಲ್ಲಿ ನೆನೆಸಿ ಮೊಳಕೆ ಬರಿಸಿ ಅದನ್ನು ಸಲಾಡ್ ಜೊತೆಗೆ ತಿನ್ನಬಹುದು. ಇಷ್ಟೇ ಅಲ್ಲ ಮೆಂತ್ಯವನ್ನು ಚೆನ್ನಾಗಿ ಹುರಿದು ಪುಡಿ ಮಾಡಿಟ್ಟುಕೊಂಡರೆ ಅದನ್ನು ನೀರಿಗೆ ಅಥವಾ ಮಜ್ಜಿಗೆಗೆ ಸೇರಿಸಿ ಕುಡಿಯಬಹುದು.