ಸಕ್ಕರೆ ಕಾಯಿಲೆ ಇರುವವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಯಾಕಂದ್ರೆ ಅವರ ಬದುಕು ಔಷಧಿಗಳ ಸಹಾಯದಿಂದಲೇ ಸಾಗುತ್ತಿರುತ್ತದೆ. ಮಧುಮೇಹದ ಜೊತೆಗೆ ಬೇರೆ ಕಾಯಿಲೆಯೂ ಶುರುವಾಗಿಬಿಟ್ಟರೆ ಅಪಾಯವಾಗಬಹುದು.
ಹಾಗಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಡಿಹೈಡ್ರೇಶನ್ ಆಗದಂತೆ ನೋಡಿಕೊಳ್ಳಬೇಕು. ಬೇಸಿಗೆಯಲ್ಲಿ ಈ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅನೇಕ ಬಾರಿ ಮಧುಮೇಹ ರೋಗಿಗಳಿಗೆ ತಮ್ಮ ದೇಹದಲ್ಲಿ ನೀರಿನ ಕೊರತೆಯಿದೆ ಎಂಬುದು ಅರಿವಿಗೆ ಬರುವುದಿಲ್ಲ. ದೇಹ ಡಿಹೈಡ್ರೇಟ್ ಆಗಿದೆ ಅನ್ನೋದನ್ನು ಬಹಿರಂಗಪಡಿಸುವ ಲಕ್ಷಣಗಳು ಯಾವುವು ಅನ್ನೋದನ್ನು ನೋಡೋಣ.
ನೀರು ಕಡಿಮೆ ಕುಡಿಯುವ ಅಭ್ಯಾಸದಿಂದ ಡಿಹೈಡ್ರೇಶನ್ ಆಗುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ದಿನಕ್ಕೆ ಕಡಿಮೆ ಅಂದ್ರೂ 7-8 ಗ್ಲಾಸ್ ನೀರು ಕುಡಿಯಬೇಕು. ಅನೇಕ ಬಾರಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ, ಇದರಿಂದಾಗಿ ಡಿಹೈಡ್ರೇಶನ್ ಆಗುತ್ತದೆ. ಹಾಗಾಗಿ ಆಗಾಗ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಿ.
ನಿರ್ಜಲೀಕರಣಕ್ಕೆ ಕಳಪೆ ಆಹಾರವೂ ಒಂದು ಕಾರಣವಾಗಬಹುದು. ಹಾಗಾಗಿ ಊಟದ ಕಡೆಗೆ ವಿಶೇಷ ಗಮನ ಹರಿಸಬೇಕು. ತುಂಬಾ ಬಾಯಾರಿಕೆಯಾಗೋದು, ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗಿ ಬಂದರೆ ನಿಮ್ಮ ಸಮಸ್ಯೆ ಹೆಚ್ಚಾಗಿದೆ ಎಂದೇ ಅರ್ಥ. ಆಗಾಗ್ಗೆ ಶೌಚಾಲಯಕ್ಕೆ ಹೋಗುವುದರಿಂದ ನಿಮ್ಮ ದೇಹದಲ್ಲಿ ನೀರಿನ ಕೊರತೆಯನ್ನು ಉಂಟಾಗಬಹುದು.
ಡಿಹೈಡ್ರೇಶನ್ ಆಗಿದೆ ಎಂಬುದರ ಮತ್ತೊಂದು ಲಕ್ಷಣವೆಂದರೆ ಯಾವಾಗಲೂ ಸುಸ್ತಾಗುವುದು. ದೇಹವು ದಣಿವನ್ನು ತಡೆದುಕೊಳ್ಳದೇ ಇದ್ದರೆ ನೀವು ಕಡಿಮೆ ನೀರು ಕುಡಿಯುತ್ತಿದ್ದೀರಿ ಎಂದೇ ಅರ್ಥ. ಇದಲ್ಲದೇ ಕೈಕಾಲು ಮರಗಟ್ಟಿದರೂ ಸ್ವಲ್ಪ ಎಚ್ಚರದಿಂದಿರಬೇಕು. ಏಕೆಂದರೆ ಇದರಿಂದ ನಿಮ್ಮ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.
ತೂಕ ವಿಪರೀತ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು ಕೂಡ ದೇಹದಲ್ಲಿ ನೀರಿನ ಕೊರತೆಯ ಸಂಕೇತವಾಗಿರಬಹುದು. ಇದನ್ನೂ ಕಡೆಗಣಿಸಬೇಡಿ.ಕೆಲವೊಮ್ಮೆ ಸಕ್ಕರೆ ಕಾಯಿಲೆ ಇರುವವರಿಗೆ ದೃಷ್ಟಿ ಕೂಡ ಮಂದವಾಗುತ್ತದೆ. ನಿಮಗೂ ಈ ಸಮಸ್ಯೆ ಶುರುವಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.