
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ಟೆನ್ಷನ್ ಇದ್ದೇ ಇರುತ್ತದೆ. ಕಚೇರಿಯ ಒತ್ತಡ, ಕೆಲಸದ ಹೊರೆ, ಆರ್ಥಿಕ ಸಮಸ್ಯೆ ಹೀಗೆ ಅನೇಕ ರೀತಿಯ ತೊಂದರೆಗಳು ಬರುತ್ತಲೇ ಇರಯತ್ತವೆ. ಸಮಸ್ಯೆಗಳಿದ್ದಾಗ ಅದರ ಬಗ್ಗೆಯೇ ಯೋಚಿಸುವುದು ಸಹಜ, ಆದರೆ ಒಂದೇ ವಿಚಾರವನ್ನು ಗಂಟೆಗಟ್ಟಲೆ ಯೋಚಿಸುತ್ತ ಕುಳಿತುಕೊಳ್ಳುವುದು ಅಥವಾ ರಾತ್ರಿ ನಿದ್ದೆ ಬರದೇ ಆಲೋಚನೆಯಲ್ಲಿ ಮುಳುಗುವುದು ಅಪಾಯಕಾರಿ. ಅತಿಯಾಗಿ ಯೋಚಿಸುವ ಅಭ್ಯಾಸವು ಖಂಡಿತವಾಗಿಯೂ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಅಭ್ಯಾಸವು ಮಾನಸಿಕ ಹಾಗೂ ದೈಹಿಕವಾಗಿ ಅನೇಕ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.
ಸಕ್ಕರೆ ಕಾಯಿಲೆ: ಈ ರೀತಿಯ ಅಸಮಾಧಾನ, ಚಿಂತೆ ಅಥವಾ ವಿಪರೀತ ಆಲೋಚನೆ ಮಾಡಿದಾಗ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಬಹುದು. ಒತ್ತಡ ಕೂಡ ರಕ್ತದ ಸಕ್ಕರೆಯ ಮೇಲೆ ಪರಿಣಾಮ ಬೀರುತ್ತದೆ. ಅತಿಯಾಗಿ ಯೋಚಿಸುವ ಅಭ್ಯಾಸ ಮಧುಮೇಹಕ್ಕೂ ಕಾರಣವಾಗಬಹುದು. ಈಗಾಗ್ಲೇ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಒತ್ತಡ ನಿರ್ವಹಣೆಗೆ ಕ್ರಮಗಳನ್ನು ಕೈಗೊಳ್ಳಲೇಬೇಕು.
ನರಗಳ ಮೇಲೆ ಕೆಟ್ಟ ಪರಿಣಾಮ: ದೇಹದಲ್ಲಿ ಇರುವ ನರಗಳ ಸಂಪೂರ್ಣ ವ್ಯವಸ್ಥೆಯು ಸಂದೇಶ ಕಳುಹಿಸುವ ಕೆಲಸವನ್ನು ಮಾಡುತ್ತದೆ. ಅತಿಯಾಗಿ ಯೋಚಿಸುವುದರಿಂದ ಅಥವಾ ಒತ್ತಡಕ್ಕೆ ಒಳಗಾಗುವುದರಿಂದ, ಅದೇ ಸಂದೇಶವನ್ನು ನರಗಳಲ್ಲಿ ರವಾನಿಸಲಾಗುತ್ತದೆ. ಇದು ಹೃದಯ ಮತ್ತು ಉಸಿರಾಟದ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಒತ್ತಡದಿಂದ ಬಳಲುತ್ತಿರುವ ಜನರು ಸುಲಭವಾಗಿ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಪಾರ್ಶ್ವವಾಯುವಿಗೆ ಬಲಿಯಾಗಲು ಇದು ಕಾರಣವಾಗುತ್ತದೆ.
ಹೃದಯದ ಮೇಲೆ ಪರಿಣಾಮ: ಒತ್ತಡವನ್ನು ಮನಸ್ಸಿಗೆ ಹಚ್ಚಿಕೊಳ್ಳುವ ಅಭ್ಯಾಸವು ಮುಂದುವರಿದರೆ, ರಕ್ತದೊತ್ತಡವು ಸಹ ಸಾಮಾನ್ಯವಾಗಿ ಉಳಿಯುವುದಿಲ್ಲ. ಆಗಾಗ್ಗೆ ರಕ್ತದೊತ್ತಡ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಅಪಧಮನಿಯಲ್ಲಿ ಊತ ಉಂಟಾಗಬಹುದು. ಇದರಿಂದಾಗಿ ಹೃದಯಕ್ಕೆ ಹಾನಿಯಾಗುವ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ, ಹೆಚ್ಚು ಯೋಚಿಸುವುದು ಮಾನಸಿಕ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ದೈಹಿಕ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಡಿ.